ಕೀರ್ತನೆ 31
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿಕೊಂಡಿದ್ದೇನೆ;
ನಾನು ಎಂದಿಗೂ ನಾಚಿಕೆಪಡದಂತೆ ಮಾಡಿರಿ;
ನಿಮ್ಮ ನೀತಿಯಲ್ಲಿ ನನ್ನನ್ನು ವಿಮೋಚಿಸಿರಿ.
ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ;
ಬೇಗ ಬಂದು ನನ್ನನ್ನು ಬಿಡಿಸಿರಿ;
ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ,
ಬಲವಾದ ಕೋಟೆಯೂ ಆಗಿರಿ.
ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ;
ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ನಡೆಸಿರಿ; ನನಗೆ ಮಾರ್ಗದರ್ಶಕರಾಗಿರಿ.
ವೈರಿಯು ಗುಪ್ತವಾಗಿ ಒಡ್ಡಿದ ಬಲೆಯೊಳಗಿಂದ ನನ್ನನ್ನು ಹೊರಗೆ ಎಳೆಯಿರಿ;
ನೀವೇ ನನಗೆ ಆಶ್ರಯ.
ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ;
ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.
 
ದೇವರಲ್ಲದವುಗಳನ್ನು ಅನುಸರಿಸುವವರಿಂದ ನಾನು ಪ್ರತ್ಯೇಕವಾಗಿದ್ದೇನೆ;
ನಾನು ಯೆಹೋವ ದೇವರಲ್ಲಿಯೇ ಭರವಸೆ ಇಟ್ಟಿದ್ದೇನೆ.
ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು;
ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು,
ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.
ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ;
ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.
 
ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಇಕ್ಕಟ್ಟಿನಲ್ಲಿದ್ದೇನೆ;
ನನ್ನ ಕಣ್ಣೂ ನನ್ನ ಪ್ರಾಣವೂ
ನನ್ನ ದೇಹವೂ ದುಃಖದಿಂದ ಕ್ಷೀಣವಾಗಿವೆ.
10 ನನ್ನ ಜೀವವು ಚಿಂತೆಯಿಂದಲೂ,
ನನ್ನ ವರ್ಷಗಳು ನಿಟ್ಟುಸಿರಿನಿಂದಲೂ ಕಳೆದುಹೋಗಿವೆ;
ನನ್ನ ಅಪರಾಧದಿಂದ ನನ್ನ ಶಕ್ತಿಯು ಕುಂದಿಹೋಗಿದೆ;
ನನ್ನ ಎಲುಬುಗಳು ಕ್ಷೀಣವಾಗಿವೆ.
11 ನನ್ನ ವೈರಿಗಳೆಲ್ಲರ ನಿಮಿತ್ತವಾಗಿ
ನನ್ನ ನೆರೆಯವರಿಗೆ ನಾನು ನಿಂದೆಯೂ,
ಮಿತ್ರರಿಗೆ ಹೆದರಿಕೆಯೂ ಆಗಿದ್ದೇನೆ;
ದಾರಿಯಲ್ಲಿ ನನ್ನನ್ನು ಕಂಡವರು ನನ್ನನ್ನು ಬಿಟ್ಟು ಓಡಿಹೋಗುತ್ತಾರೆ.
12 ನಾನು ಸತ್ತುಹೋದವರಂತೆ ಎಲ್ಲರು ನನ್ನನ್ನು ಮರೆತುಬಿಟ್ಟಿದ್ದಾರೆ;
ನಾನು ಒಡೆದ ಮಡಕೆಯಂತೆ ಇದ್ದೇನೆ.
13 ಅನೇಕರು ಹೀಗೆ ಪಿಸುಗುಟ್ಟುವುದನ್ನು ಕೇಳಿದ್ದೇನೆ.
ಸುತ್ತಲೂ ಅಂಜಿಕೆ ಇದೆ;
ಅನೇಕರು ನನ್ನ ಪ್ರಾಣವನ್ನು ತೆಗೆಯಬೇಕೆಂದು
ಒಳಸಂಚು ಮಾಡುತ್ತಿದ್ದಾರೆ.
 
14 ಯೆಹೋವ ದೇವರೇ, ನಾನು ನಿಮ್ಮಲ್ಲಿ ಭರವಸೆ ಇಟ್ಟಿದ್ದೇನೆ;
“ನನ್ನ ದೇವರು ನೀವೇ,” ಎಂದು ಹೇಳಿಕೊಂಡಿದ್ದೇನೆ.
15 ನನ್ನ ಸಮಯವು ನಿಮ್ಮ ಕೈಯಲ್ಲಿ ಇವೆ;
ನನ್ನ ಶತ್ರುಗಳ ಕೈಯಿಂದಲೂ
ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸಿರಿ.
16 ನಿಮ್ಮ ಮುಖವು ನಿಮ್ಮ ಸೇವಕನ ಮೇಲೆ ಪ್ರಕಾಶಿಸಲಿ;
ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನನ್ನು ರಕ್ಷಿಸಿರಿ.
17 ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ;
ನಾನು ನಿಮಗೆ ಮೊರೆಯಿಟ್ಟಿದ್ದೇನೆ;
ದುಷ್ಟರು ನಾಚಿಕೆಪಡಲಿ;
ಅವರು ಸಮಾಧಿ ಸೇರಲಿ.
18 ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ,
ಕಠಿಣವಾಗಿಯೂ ಮಾತನಾಡುವ
ಸುಳ್ಳಿನ ತುಟಿಗಳು ಮೌನವಾಗಲಿ.
 
19 ನಿಮ್ಮ ಒಳ್ಳೆಯತನವು ಎಷ್ಟೋ ಸಮೃದ್ಧ;
ನೀವು ನಿಮಗೆ ಭಯಪಡುವವರಿಗೋಸ್ಕರ ಆ ಒಳ್ಳೆಯತನವನ್ನಿಟ್ಟಿದ್ದೀರಿ,
ನಿಮ್ಮನ್ನು ಆಶ್ರಯಿಸಿಕೊಳ್ಳುವವರಿಗೆ
ನೀವು ನಿಮ್ಮ ಒಳ್ಳೆಯತನವನ್ನು ಎಲ್ಲರ ಮುಂದೆ ದಯಪಾಲಿಸಿದ್ದೀರಿ.
20 ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ
ನೀವು ಅವರನ್ನು ನಿಮ್ಮ ಸಾನಿಧ್ಯದಲ್ಲಿಯೇ ಮರೆಮಾಡುತ್ತೀರಿ;
ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ
ಅವರನ್ನು ನಿಮ್ಮ ನಿವಾಸದಲ್ಲಿ ಅಡಗಿಸುತ್ತೀರಿ.
 
21 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ;
ಮುತ್ತಿಗೆ ಹಾಕಲಾದ ನಗರದಲ್ಲಿದ್ದ ನನಗೆ
ದೇವರು ಆಶ್ಚರ್ಯಕರವಾದ ಒಡಂಬಡಿಕೆಯ ಪ್ರೀತಿಯನ್ನು ತೋರಿಸಿದ್ದಾರೆ.
22 “ನಾನು ನಿಮ್ಮ ಕಣ್ಣುಗಳ ಎದುರಿನಿಂದ ತೆಗೆದು ಹಾಕಲಾಗಿದ್ದೇನೆ” ಎಂದು
ನನ್ನ ಗಾಬರಿಯಲ್ಲಿ ಹೇಳಿದೆನು;
ಆದರೂ ನಾನು ಸಹಾಯಕ್ಕಾಗಿ ನಿಮಗೆ ಮೊರೆಯಿಡಲು
ನೀವು ಕರುಣೆಗಾಗಿ ಕೂಗಿದ್ದನ್ನು ಕೇಳಿದ್ದೀರಿ.
 
23 ಭಕ್ತರೇ, ಯೆಹೋವ ದೇವರನ್ನು ಪ್ರೀತಿಸಿರಿ;
ಯೆಹೋವ ದೇವರು ನಂಬಿಗಸ್ತರನ್ನು ಕಾಯುತ್ತಾರೆ;
ಅಹಂಕಾರಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.
24 ಯೆಹೋವ ದೇವರಲ್ಲಿ ನಿರೀಕ್ಷಿಸುವವರೆಲ್ಲರೂ ದೃಢವಾಗಿರಿ;
ನಿಮ್ಮ ಹೃದಯವು ಧೈರ್ಯದಿಂದ ಇರಲಿ.