15
ಮೃದುವಾದ ಉತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ.
ಆದರೆ ಬಿರುಸಾದ ಮಾತುಗಳು ಕೋಪವನ್ನು ಎಬ್ಬಿಸುತ್ತದೆ.
 
ಜ್ಞಾನಿಯ ನಾಲಿಗೆಯು ಒಳ್ಳೆಯ ಪರಿಜ್ಞಾನವನ್ನು ಹರಡುತ್ತದೆ.
ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನು ಹೊರಗೆಡವುತ್ತದೆ.
 
ಯೆಹೋವ ದೇವರ ಕಣ್ಣುಗಳು ಪ್ರತಿಯೊಂದು ಸ್ಥಳದಲ್ಲಿ ಇವೆ.
ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಾ ಇರುವರು.
 
ಹಿತವಾದ ನಾಲಿಗೆಯು ಜೀವವೃಕ್ಷ.
ಆದರೆ ವಕ್ರ ನಾಲಿಗೆಯು ಆತ್ಮಚೈತನ್ಯವನ್ನು ನಾಶಮಾಡುವುದು.
 
ಮೂರ್ಖನು ತನ್ನ ತಂದೆಯ ಶಿಸ್ತನ್ನು ತಿರಸ್ಕರಿಸುತ್ತಾನೆ.
ಆದರೆ ಜಾಣನು ಗದರಿಕೆಯನ್ನು ಲಕ್ಷಿಸುವನು.
 
ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು.
ಆದರೆ ದುಷ್ಟನ ಆದಾಯವು ವಿನಾಶ ತರುವುದು.
 
ಜ್ಞಾನಿಗಳ ತುಟಿಗಳು ಪರಿಜ್ಞಾನವನ್ನು ಹರಡುತ್ತವೆ.
ಆದರೆ ಬುದ್ಧಿಹೀನರ ಹೃದಯವು ಹಾಗೆ ಮಾಡುವುದೇ ಇಲ್ಲ.
 
ದುಷ್ಟರ ಯಜ್ಞವು ಯೆಹೋವ ದೇವರಿಗೆ ಅಸಹ್ಯ.
ಆದರೆ ಯಥಾರ್ಥವಂತರ ಪ್ರಾರ್ಥನೆಯು ಅವರಿಗೆ ಮೆಚ್ಚುಗೆ.
 
ದುಷ್ಟರ ಮಾರ್ಗವು ಯೆಹೋವ ದೇವರಿಗೆ ಅಸಹ್ಯ.
ಆದರೆ ನೀತಿಯನ್ನು ಹಿಂಬಾಲಿಸುವವನನ್ನು ಅವರು ಪ್ರೀತಿಸುತ್ತಾರೆ.
 
10 ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ.
ಗದರಿಕೆಯನ್ನು ಹಗೆಮಾಡುವವನು ಸಾಯುವನು.
 
11 ಮರಣವೂ ಪಾತಾಳವೂ ಯೆಹೋವ ದೇವರಿಗೆ ಕಾಣುತ್ತಿರುವಾಗ,
ಮನುಷ್ಯರ ಹೃದಯಗಳು ಅವರಿಗೆ ಮುಚ್ಚುಮರೆಯೇ?
 
12 ಕುಚೋದ್ಯಗಾರನು ಬುದ್ಧಿವಾದವನ್ನು ದ್ವೇಷಿಸುತ್ತಾನೆ.
ಅವನು ಜ್ಞಾನಿಗಳಿಂದ ದೂರವಿರುತ್ತಾನೆ.
 
13 ಸಂತೋಷದ ಹೃದಯವು ಹರ್ಷವುಳ್ಳ ಮುಖಭಾವ ತೋರುವುದು.
ಆದರೆ ನೊಂದ ಹೃದಯವು ಆತ್ಮಚೈತನ್ಯವನ್ನು ಕುಂದಿಸುತ್ತದೆ.
 
14 ವಿವೇಕವುಳ್ಳವನ ಹೃದಯವು ಪರಿಜ್ಞಾನವನ್ನು ಹುಡುಕುತ್ತದೆ.
ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನೇ ತಿನ್ನುತ್ತದೆ.
 
15 ಬಾಧಿತರ ದಿನಗಳೆಲ್ಲವೂ ದುಃಖಭರಿತ.
ಆದರೆ ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
 
16 ತೊಂದರೆಯಿಂದ ಕೂಡಿದ ದೊಡ್ಡ ಸಂಪತ್ತಿಗಿಂತ
ಯೆಹೋವ ದೇವರ ಭಯದಿಂದ ಕೂಡಿದ ಅಲ್ಪವೇ ಮೇಲು.
 
17 ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸಕ್ಕಿಂತಲೂ,
ಪ್ರೀತಿ ಇರುವಲ್ಲಿ ಸಸ್ಯಾಹಾರ ಊಟವೇ ಉತ್ತಮ.
 
18 ಕೋಪಿಷ್ಟನು ವಿವಾದವನ್ನು ಎಬ್ಬಿಸುವನು.
ಆದರೆ ತಾಳ್ಮೆಯಿಂದ ಇರುವವನು ಜಗಳವನ್ನು ಶಾಂತಗೊಳಿಸುವನು.
 
19 ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ.
ಆದರೆ ಯಥಾರ್ಥವಂತನ ಮಾರ್ಗವು ರಾಜಮಾರ್ಗ.
 
20 ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸಗೊಳಿಸುತ್ತಾನೆ.
ಬುದ್ಧಿಹೀನನಾದರೋ ತನ್ನ ತಾಯಿಯನ್ನು ತಿರಸ್ಕರಿಸುತ್ತಾನೆ.
 
21 ಬುದ್ಧಿಹೀನನು ಮೂರ್ಖತನದಲ್ಲಿ ಉಲ್ಲಾಸಿಸುವನು.
ತಿಳುವಳಿಕೆಯನ್ನು ಹೊಂದಿರುವವನು ನೇರ ಮಾರ್ಗದಲ್ಲಿ ನಡೆಯುತ್ತಾನೆ.
 
22 ಸಲಹೆಯ ಕೊರತೆಯಿಂದ ಯೋಜನೆಗಳು ವಿಫಲಗೊಳ್ಳುತ್ತವೆ.
ಆದರೆ ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸಫಲಗೊಳ್ಳುವುವು.
 
23 ಸೂಕ್ತವಾದ ಉತ್ತರವನ್ನು ನೀಡುವಲ್ಲಿ ಮನುಷ್ಯನು ಸಂತೋಷವನ್ನು ಕಂಡುಕೊಳ್ಳುತ್ತಾನೆ.
ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು.
 
24 ಜೀವದ ಮಾರ್ಗವು ಜಾಣನನ್ನು ಮೇಲಕ್ಕೆತ್ತುವುದು.
ಅದು ಅವನನ್ನು ಪಾತಾಳಕ್ಕೆ ಇಳಿಯುವದರಿಂದ ತಪ್ಪಿಸುವುದು.
 
25 ಯೆಹೋವ ದೇವರು ಗರ್ವಿಷ್ಠರ ಮನೆಯನ್ನು ಕೆಡವಿಬಿಡುವರು,
ಆದರೆ ವಿಧವೆಯರ ಮೇರೆಯನ್ನು ಅವರು ನೆಲೆಗೊಳಿಸುವರು.
 
26 ದುಷ್ಟರ ಆಲೋಚನೆಯು ಯೆಹೋವ ದೇವರಿಗೆ ಅಸಹ್ಯವಾಗಿದೆ,
ಆದರೆ ಸೌಜನ್ಯಶೀಲ ಮಾತುಗಳು ಅವರ ದೃಷ್ಟಿಯಲ್ಲಿ ಶುದ್ಧವಾಗಿವೆ.
 
27 ದುರಾಶೆಯುಳ್ಳವನು ತನ್ನ ಕುಟುಂಬವನ್ನು ಬಾಧಿಸುತ್ತಾನೆ.
ಲಂಚವನ್ನು ಹಗೆಮಾಡುವವನು ಬದುಕುವನು.
 
28 ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ.
ಆದರೆ ದುಷ್ಟರ ಬಾಯಿಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
 
29 ಯೆಹೋವ ದೇವರು ದುಷ್ಟರಿಗೆ ದೂರ;
ಆದರೆ ನೀತಿವಂತರ ಪ್ರಾರ್ಥನೆಯನ್ನು ಅವರು ಕೇಳುತ್ತಾರೆ.
 
30 ಹರ್ಷಚಿತ್ತದ ನೋಟವು ಹೃದಯಕ್ಕೆ ಸಂತೋಷವನ್ನು ತರುತ್ತದೆ.
ಒಳ್ಳೆಯ ವಾರ್ತೆಯು ಎಲುಬುಗಳನ್ನು ಪುಷ್ಟಿಗೊಳಿಸುತ್ತದೆ.
 
31 ಜೀವದ ಗದರಿಕೆಗೆ ಕಿವಿಗೊಡುವವನು,
ಜ್ಞಾನಿಗಳ ನಡುವೆ ವಾಸಿಸುವವನಾಗಿದ್ದಾನೆ.
 
32 ಶಿಸ್ತನ್ನು ನಿರಾಕರಿಸುವವನು, ತನಗೆ ತಾನೆ ಹಾನಿ ತಂದುಕೊಳ್ಳುತ್ತಾನೆ,
ಆದರೆ ಗದರಿಕೆಗೆ ಕಿವಿಗೊಡುವವನು ವಿವೇಕವನ್ನು ಪಡೆಯುತ್ತಾನೆ.
 
33 ಯೆಹೋವ ದೇವರ ಭಯವೇ ಜ್ಞಾನವನ್ನು ಕಲಿಸುತ್ತದೆ.
ನಮ್ರತೆ ಗೌರವಕ್ಕೆ ಮೊದಲು ಬರುತ್ತದೆ.