24
ಯುಗದ ಅಂತ್ಯದ ಸೂಚನೆಗಳು
ಯೇಸು ದೇವಾಲಯದಿಂದ ಹೊರಗೆ ಹೋದಾಗ ಅವರ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕಾಗಿ ಯೇಸುವಿನ ಬಳಿಗೆ ಬಂದರು. ಆಗ ಯೇಸು ಅವರಿಗೆ, “ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು.
ಆಗ ಯೇಸು ಉತ್ತರವಾಗಿ ಅವರಿಗೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು. ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ, ಆದರೆ ನೀವು ಕಳವಳಗೊಳ್ಳದಂತೆ ನೋಡಿಕೊಳ್ಳಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ. ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಅಲ್ಲಲ್ಲಿ ಬರಗಾಲಗಳು ಮತ್ತು ಭೂಕಂಪಗಳು ಸಂಭವಿಸುತ್ತವೆ. ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.
“ಆಗ ಜನರು ನಿಮ್ಮನ್ನು ಹಿಂಸೆಪಡಿಸುವುದಕ್ಕಾಗಿ ಒಪ್ಪಿಸಿ ನಿಮ್ಮನ್ನು ಕೊಲ್ಲುವರು. ಇದಲ್ಲದೆ ನನ್ನ ಹೆಸರಿನ* 24:9 ಅಂದರೆ ಯೇಸುವಿನ ಹಿಂಬಾಲಕರು ಆಗಿರುವುದರಿಂದ ನಿಮಿತ್ತವಾಗಿ ಎಲ್ಲಾ ಜನಾಂಗದವರು ನಿಮ್ಮನ್ನು ದ್ವೇಷಮಾಡುವರು. 10 ಆಗ ಅನೇಕರು ವಿಶ್ವಾಸದಿಂದ ಬಿದ್ದವರಾಗಿ ಒಬ್ಬರಿಗೊಬ್ಬರು ದ್ರೋಹ ಬಗೆಯುವರು ಮತ್ತು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿಸುವರು. 12 ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗುವುದು. 13 ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು. 14 ಪರಲೋಕ ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಸರ್ವಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವದು, ತರುವಾಯ ಅಂತ್ಯ ಬರುವುದು.
15 “ಆದ್ದರಿಂದ ಪ್ರವಾದಿ ದಾನಿಯೇಲನಿಂದ ಹೇಳಿದ ಹಾಗೆ ‘ಅಸಹ್ಯ ವಸ್ತು’ 24:15 ದಾನಿ 9:27; 11:31; 12:11 ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ, ಓದುವವನು ತಿಳಿದುಕೊಳ್ಳಲಿ. 16 ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವುದಕ್ಕೆ ಕೆಳಗೆ ಇಳಿಯದಿರಲಿ. 18 ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ. 19 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! 20 ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಆಗದಂತೆ ಪ್ರಾರ್ಥಿಸಿರಿ. 21 ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.
22 “ಆ ದಿನಗಳನ್ನು ಕಡಿಮೆ ಮಾಡದಿದ್ದರೆ, ಒಬ್ಬನೂ ಉಳಿಯುವಂತಿಲ್ಲ. ಆದರೆ ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಲಾಗುವುದು. 23 ಆಗ ಯಾರಾದರೂ ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ! ಅಗೋ ಅಲ್ಲಿದ್ದಾನೆ!’ ಎಂದು ಹೇಳಿದರೆ ಅವನನ್ನು ನಂಬಬೇಡಿರಿ. 24 ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. 25 ನೋಡಿರಿ, ಮುಂಚಿತವಾಗಿ ನಾನು ನಿಮಗೆ ಹೇಳಿದ್ದೇನೆ.
26 “ಅವರು ನಿಮಗೆ, ‘ನೋಡಿ, ಆತನು ಅರಣ್ಯದಲ್ಲಿದ್ದಾನೆ’ ಎಂದು ಹೇಳಿದರೆ ಹೋಗಬೇಡಿರಿ. ‘ನೋಡಿ, ಆತನು ಒಳ ಕೋಣೆಯಲ್ಲಿದ್ದಾನೆ,’ ಎಂದು ಹೇಳಿದರೂ ನಂಬಬೇಡಿರಿ. 27 ಏಕೆಂದರೆ ಮಿಂಚು ಪೂರ್ವದಿಂದ ಮಿನುಗಿ ಪಶ್ಚಿಮದವರೆಗೆ ಹೊಳೆಯುವಂತೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು. 28 ಹೆಣ ಇದ್ದಲ್ಲಿಗೆ, ಹದ್ದುಗಳು ಬಂದು ಸೇರುತ್ತವೆ. 24:28 ಈ ಸಂಕೇತಗಳು ಕೊನೆಯ ದಿನಗಳನ್ನು ಸೂಚಿಸುತ್ತವೆ.
29 “ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ,
“ ‘ಸೂರ್ಯನು ಕತ್ತಲಾಗುವನು;
ಚಂದ್ರನು ಕಾಂತಿಹೀನನಾಗುವನು.
ಆಕಾಶದಿಂದ ನಕ್ಷತ್ರಗಳು ಬೀಳುವವು;
ಮತ್ತು ಆಕಾಶದ ಶಕ್ತಿಗಳು§ 24:29 ಅಥವಾ ಆಕಾಶದ ಗೋಳಗಳು ಕದಲುವವು.’* 24:29 ಯೆಶಾಯ 13:10; 34:4
30 “ಆಗ ಮನುಷ್ಯಪುತ್ರನಾದ ನನ್ನ ಸೂಚನೆಯು ಆಕಾಶದಲ್ಲಿ ಕಾಣುವುದು. ಭೂಮಿಯ ಎಲ್ಲಾ ಜನಾಂಗದವರು ಗೋಳಾಡುವರು. ಮನುಷ್ಯಪುತ್ರನಾದ ನಾನು ಆಕಾಶದ ಮೇಘಗಳಲ್ಲಿ, ಶಕ್ತಿಯಿಂದಲೂ ಮಹಾಪ್ರಭಾವದಿಂದಲೂ ಬರುವುದನ್ನು ಅವರು ಕಾಣುವರು. 24:30 ನೋಡಿರಿ ದಾನಿ 7:13-14 31 ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು. ಆಗ ಅವರು ಆತನಿಂದ ಆಯ್ಕೆಯಾದವರನ್ನು ನಾಲ್ಕು ದಿಕ್ಕುಗಳಿಂದಲೂ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
32 “ಅಂಜೂರ ಮರದ ದೃಷ್ಟಾಂತದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 33 ಅದೇ ಪ್ರಕಾರ, ಇವೆಲ್ಲವೂ ಆಗುವುದನ್ನು ನೀವು ಕಾಣುವಾಗ, ಅಂತ್ಯವು ಬಾಗಿಲ ಹತ್ತಿರದಲ್ಲಿಯೇ ಇದೆ ಎಂದು ತಿಳಿದುಕೊಳ್ಳಿರಿ. 34 ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 35 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
ತಿಳಿಯದ ದಿನ ಹಾಗೂ ಗಳಿಗೆ
36 “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಮನುಷ್ಯಪುತ್ರನಾದ ನನಗೂ ತಿಳಿಯದು. 37 ಆದರೆ ನೋಹನ ದಿವಸಗಳು ಇದ್ದಂತೆಯೇ, ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು. 38 ಪ್ರಳಯವು ಬರುವುದಕ್ಕಿಂತ ಮುಂಚಿನ ಆ ದಿವಸಗಳಲ್ಲಿ, ನೋಹನು ನಾವೆಯಲ್ಲಿ ಸೇರಿದ ದಿವಸದವರೆಗೆ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. 39 ಜಲಪ್ರಳಯವು ಬಂದು ಅವರನ್ನು ಕೊಚ್ಚಿಕೊಂಡು ಹೋಗುವವರೆಗೂ ಅವರಿಗೆ ಅದು ತಿಳಿದಿರಲಿಲ್ಲ. ಹಾಗೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು. 40 ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 41 ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಬೀಸುತ್ತಿರುವಾಗ, ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.
42 “ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರುತ್ತಾನೋ ನಿಮಗೇ ಗೊತ್ತಿಲ್ಲವಾದ್ದರಿಂದ ಎಚ್ಚರವಾಗಿರಿ. 43 ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕದಂತೆ ಕಾಯುತ್ತಿದ್ದನೆಂದು ನೀವು ತಿಳಿದುಕೊಳ್ಳಿರಿ. 44 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ.
45 “ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಸೇವಕನು ಯಾರು? 46 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು. 47 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 48 ಆದರೆ ದುಷ್ಟ ಸೇವಕನು ತನ್ನ ಹೃದಯದಲ್ಲಿ, ‘ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ,’ ಎಂದು ಹೇಳಿಕೊಂಡು 49 ತನ್ನ ಜೊತೆಯ ಸೇವಕರನ್ನು ಹೊಡೆಯುತ್ತಾ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸುವುದಾದರೆ, 50 ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು, 51 ಅವನನ್ನು ಕ್ರೂರವಾಗಿ ಹಿಂಸಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.

*24:9 24:9 ಅಂದರೆ ಯೇಸುವಿನ ಹಿಂಬಾಲಕರು ಆಗಿರುವುದರಿಂದ

24:15 24:15 ದಾನಿ 9:27; 11:31; 12:11

24:28 24:28 ಈ ಸಂಕೇತಗಳು ಕೊನೆಯ ದಿನಗಳನ್ನು ಸೂಚಿಸುತ್ತವೆ.

§24:29 24:29 ಅಥವಾ ಆಕಾಶದ ಗೋಳಗಳು

*24:29 24:29 ಯೆಶಾಯ 13:10; 34:4

24:30 24:30 ನೋಡಿರಿ ದಾನಿ 7:13-14