16
ಕುಯುಕ್ತಿಯುಳ್ಳ ನಿರ್ವಾಹಕನ ಸಾಮ್ಯ
1 ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದು: “ಒಬ್ಬ ಐಶ್ವರ್ಯವಂತನಿದ್ದನು, ಅವನಿಗಿದ್ದ ಒಬ್ಬ ನಿರ್ವಾಹಕನು ಅವನ ಸರಕುಗಳನ್ನು ಹಾಳು ಮಾಡುತ್ತಿದ್ದಾನೆಂದು ಅವನಿಗೆ ಯಾರೋ ದೂರು ಹೇಳಿದರು. 2 ಆಗ ಐಶ್ವರ್ಯವಂತನು ಆ ನಿರ್ವಾಹಕನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವುದು? ನಿನ್ನ ಲೆಕ್ಕವನ್ನು ಒಪ್ಪಿಸು. ನೀನು ಇನ್ನು ಮೇಲೆ ನಿರ್ವಾಹಕನಾಗಿರಲು ಆಗಲ್ಲ,’ ಎಂದನು.
3 “ಆಗ ಆ ನಿರ್ವಾಹಕನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಕೆಲಸದಿಂದ ತೆಗೆದುಬಿಡುತ್ತಾನಲ್ಲಾ. ಅಗೆಯಲು ನನಗೆ ಶಕ್ತಿಯಿಲ್ಲ, ಭಿಕ್ಷೆ ಬೇಡಲು ನನಗೆ ನಾಚಿಕೆ. 4 ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ, ನಾನು ಏನು ಮಾಡಬೇಕಾದದ್ದು ಗೊತ್ತಾಯಿತು’ ಎಂದುಕೊಂಡನು.
5 “ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲವೆಷ್ಟು?’ ಎಂದು ಕೇಳಲು,
6 “ ‘ಅವನು, 3,000 ಲೀಟರ್ ಎಣ್ಣೆ,’* 16:6 ಸುಮಾರು, 100 ಬತ್. ಇದು ಹೀಬ್ರೂ ಪದ ಎಂದನು.
“ಆಗ ನಿರ್ವಾಹಕನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೋ, ಬೇಗ ಕುಳಿತುಕೊಂಡು 1,500 ಲೀಟರ್ ಎಂದು ಬರೆ,’ ಎಂದು ಹೇಳಿದನು.
7 “ಬಳಿಕ ಅವನು ಮತ್ತೊಬ್ಬನಿಗೆ, ‘ನೀನೆಷ್ಟು ಸಾಲ ತೀರಿಸಬೇಕು,’ ಎಂದು ಕೇಳಲು,
“30 ‘ಟನ್ ಗೋಧಿ,’† 16:7 ಸುಮಾರು 100 ಕೋರ್ ಎಂದನು.
“ಆಗ ಅವನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೊಂಡು 24 ಟನ್ ಎಂದು ಬರೆ,’ ಎಂದನು.
8 “ಆಗ ಯಜಮಾನನು ಆ ಅಪನಂಬಿಗಸ್ತ ನಿರ್ವಾಹಕನು ಕುಯುಕ್ತಿಯಿಂದ ಮಾಡಿದ್ದನ್ನು ಹೊಗಳಿದನು. ಯೇಸು ಮುಂದುವರಿಸಿ ಹೇಳಿದ್ದು: ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಯುಕ್ತಿಯುಳ್ಳವರಾಗಿದ್ದಾರೆ. 9 ನಾನು ನಿಮಗೆ ಹೇಳುವುದೇನೆಂದರೆ, ಲೌಕಿಕ ಸಂಪತ್ತಿನಿಂದ‡ 16:9 ಅಥವಾ ಅನ್ಯಾಯದ ಧನದಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಅದು ನಿಮ್ಮನ್ನು ಬಿಟ್ಟುಹೋದಾಗ ನಿಮ್ಮನ್ನು ನಿತ್ಯ ನಿವಾಸಗಳಲ್ಲಿ ಸೇರಿಸಿಕೊಳ್ಳುವರು.
10 “ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ನಂಬಿಗಸ್ತರಾಗಿರುವರು ಮತ್ತು ಸ್ವಲ್ಪವಾದದ್ದರಲ್ಲಿ ಅಪನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ಅಪನಂಬಿಗಸ್ತರಾಗಿರುವರು. 11 ಆದ್ದರಿಂದ ಲೌಕಿಕ ಸಂಪತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ, ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು? 12 ಮತ್ತೊಬ್ಬರಿಗೆ ಸೇರಿದ ವಸ್ತುಗಳಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ ನಿಮ್ಮ ಪಾಲನ್ನು ನಿಮಗೆ ಯಾರು ಒಪ್ಪಿಸುವರು?
13 “ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು.
14 ಆಗ ಹಣದಾಶೆಯಿಂದ ಕೂಡಿದ ಫರಿಸಾಯರು, ಇವುಗಳನ್ನು ಕೇಳಿ ಯೇಸುವನ್ನು ಪರಿಹಾಸ್ಯ ಮಾಡಿದರು. 15 ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.
ಹೆಚ್ಚುವರಿ ಬೋಧನೆಗಳು
16 “ಮೋಶೆಯ ನಿಯಮವೂ ಪ್ರವಾದನೆಗಳೂ ಯೋಹಾನನವರೆಗೆ ಇದ್ದವು. ಅಂದಿನಿಂದ, ದೇವರ ರಾಜ್ಯವು ಸಾರಲಾಗಿದೆ. ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಿದ್ದಾನೆ. 17 ನಿಯಮದ ಒಂದು ಚುಕ್ಕೆಯು ಬಿದ್ದುಹೋಗುವುದಕ್ಕಿಂತ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.
18 “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.”
ಸಿರಿವಂತನೂ ಬಡ ಲಾಜರನೂ
19 ಅನಂತರ ಯೇಸು ಹೀಗೆ ಒಂದು ಸಾಮ್ಯ ಹೇಳಿದರು, “ಬಹು ಬೆಲೆಬಾಳುವ§ 16:19 ಗ್ರೀಕ್ ಭಾಷೆಯಲ್ಲಿ ಸಕಲಾತಿ, ನಸುಗೆಂಪು ಹಾಗೂ ನಯವಾದ ನಾರುಮಡಿ ವಸ್ತ್ರಗಳನ್ನೂ ಧರಿಸಿಕೊಂಡು ಪ್ರತಿದಿನವೂ ಭೋಗಗಳಲ್ಲಿಯೂ ಆಡಂಭರದಲ್ಲಿಯೂ ಬಾಳುತ್ತಿದ್ದ ಒಬ್ಬ ಧನವಂತನಿದ್ದನು. 20 ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು. 21 ಧನವಂತನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುವುದಕ್ಕೆ ಆ ಲಾಜರನು ಹಂಬಲಿಸುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 “ಒಂದು ದಿನ ಆ ಭಿಕ್ಷುಕನು ಸತ್ತುಹೋದನು. ದೇವದೂತರು ಅವನನ್ನು ಅಬ್ರಹಾಮನ ಬಳಿಗೆ ತೆಗೆದುಕೊಂಡು ಹೋದರು. ಧನವಂತನು ಸಹ ಸತ್ತುಹೋದನು. ಅವನಿಗೆ ಶವಸಂಸ್ಕಾರವಾಯಿತು. 23 ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು. 24 ಆಗ ಧನವಂತನು, ‘ತಂದೆಯೇ ಅಬ್ರಹಾಮನೇ, ನನ್ನನ್ನು ಕರುಣಿಸು. ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ, ನನ್ನ ನಾಲಿಗೆಯನ್ನು ತಣ್ಣಗೆ ಮಾಡಲು ಅವನನ್ನು ಕಳುಹಿಸು, ಈ ಅಗ್ನಿಜ್ವಾಲೆಯಲ್ಲಿ ಯಾತನೆಪಡುತ್ತಿದ್ದೇನೆ,’ ಎಂದು ಕೂಗಿ ಹೇಳಿದನು.
25 “ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ. 26 ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು.
27 “ಆಗ ಅವನು, ‘ಅಪ್ಪಾ, ಹಾಗಾದರೆ ನೀನು ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ. 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರೂ ಈ ಯಾತನೆಯ ಸ್ಥಳಕ್ಕೆ ಬಾರದ ಹಾಗೆ ಲಾಜರನು ಅವರನ್ನು ಎಚ್ಚರಿಸಲಿ,’ ಎಂದನು.
29 “ಅದಕ್ಕೆ ಅಬ್ರಹಾಮನು ಅವನಿಗೆ, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅದರಲ್ಲಿರುವುದಕ್ಕೆ ಅವರು ಕಿವಿಗೊಡಲಿ,’ ಎಂದನು.
30 “ಆಗ ಅವನು, ‘ಹಾಗಲ್ಲ, ತಂದೆ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಜೀವಂತವಾಗಿ ಅವರ ಬಳಿಗೆ ಹೋದರೆ, ಅವರು ಪಶ್ಚಾತ್ತಾಪ ಪಡುವರು,’ ಎಂದನು.
31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನೇ ಅವರು ಕೇಳದೆ ಹೋದರೆ, ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವುದಿಲ್ಲ,’ ಎಂದು ಹೇಳಿದನು.”