51
ಯೆಹೋವ ದೇವರು ಹೀಗೆ ಹೇಳುತ್ತಾರೆ,
“ಇಗೋ, ನಾನು ಬಾಬಿಲೋನಿಗೆ ವಿರೋಧವಾಗಿಯೂ,
ನನಗೆದುರಾಗಿ ಎದ್ದಿರುವ ಲೇಬ್ ಕಾಮೈ* 51:1 ಲೇಬ್ ಕಾಮೈ ರಹಸ್ಯ ಭಾಷೆಯಲ್ಲಿ ಬಾಬಿಲೋನ್. ಪ್ರಜೆಗಳ ವಿರೋಧವಾಗಿಯೂ ನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು.
ವಿದೇಶಿಯರನ್ನು ಬಾಬಿಲೋನಿಗೆ ಕಳುಹಿಸುವೆನು;
ಅವರು ಅದನ್ನು ತೂರಿ ಅದರ ದೇಶವನ್ನು ಬರಿದು ಮಾಡುವರು;
ಏಕೆಂದರೆ ದುರ್ದಿನದಲ್ಲಿ ಸುತ್ತಲಾಗಿ
ಅದಕ್ಕೆ ವಿರೋಧವಾಗಿರುವರು.
ಬಿಲ್ಲು ಬಗ್ಗಿಸುವವನಿಗೆ ವಿರೋಧವಾಗಿಯೂ,
ಕವಚದಲ್ಲಿ ತನ್ನನ್ನು ಹೆಚ್ಚಿಸಿಕೊಳ್ಳುವವನಿಗೆ ವಿರೋಧವಾಗಿಯೂ
ಬಿಲ್ಲಿನವನು ತನ್ನ ಬಿಲ್ಲನ್ನು ಬಗ್ಗಿಸಲಿ;
ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ;
ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
ಈ ಪ್ರಕಾರ ಬಾಬಿಲೋನಿಯರ ದೇಶದಲ್ಲಿ ಹತರಾಗಿ ಬೀಳುವರು.
ಅದರ ಬೀದಿಗಳಲ್ಲಿಯೇ ಕತ್ತಿಗೆ ತುತ್ತಾಗುವರು.
ಏಕೆಂದರೆ ಅವರ ದೇಶವು ಇಸ್ರಾಯೇಲಿನ
ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ
ಸೇನಾಧೀಶ್ವರ ಯೆಹೋವ ದೇವರು
ಇಸ್ರಾಯೇಲನ್ನಾಗಲಿ, ಯೆಹೂದವನ್ನಾಗಲಿ ಕೈಬಿಡಲಿಲ್ಲ.
 
“ಬಾಬಿಲೋನಿನೊಳಗಿಂದ ಓಡಿಹೋಗಿರಿ;
ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ;
ಅದರ ಪಾಪದಲ್ಲಿ ನಾಶವಾಗಬೇಡಿರಿ;
ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯ ಕಾಲವು;
ಆತನೇ ಅದಕ್ಕೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
ಬಾಬಿಲೋನ್ ಯೆಹೋವ ದೇವರ ಕೈಯಲ್ಲಿ ಭೂಮಿಗೆಲ್ಲಾ
ಅಮಲೇರಿಸಿದ ಚಿನ್ನದ ಪಾತ್ರೆಯಾಗಿತ್ತು;
ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು;
ಆದ್ದರಿಂದ ಜನಾಂಗಗಳು ಹುಚ್ಚರಾದರು.
ಇದ್ದಕ್ಕಿದ್ದ ಹಾಗೆ ಬಾಬಿಲೋನ್ ಬಿದ್ದು ಹಾಳಾಗಿದೆ;
ಅದರ ವಿಷಯ ಗೋಳಾಡಿರಿ;
ಅದರ ನೋವಿಗೆ ತೈಲ ತೆಗೆದುಕೊಳ್ಳಿರಿ;
ಒಂದು ವೇಳೆ ವಾಸಿಯಾದೀತು.
 
“ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು;
ಆದರೆ ಅದು ವಾಸಿಯಾಗಲಿಲ್ಲ;
ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ;
ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ;
ಆಕಾಶಗಳವರೆಗೂ ಏರುತ್ತದೆ.’
 
10 “ ‘ಯೆಹೋವ ದೇವರು ನಮ್ಮ ನೀತಿಯನ್ನು ಹೊರಗೆ ತಂದಿದ್ದಾರೆ;
ಬನ್ನಿ, ನಮ್ಮ ದೇವರಾದ ಯೆಹೋವ ದೇವರ ಕ್ರಿಯೆಯನ್ನು
ಚೀಯೋನಿನಲ್ಲಿ ಸಾರಿ ಹೇಳೋಣ.’
 
11 “ಬಾಣಗಳನ್ನು ಮೆರುಗು ಮಾಡಿರಿ;
ಡಾಲುಗಳನ್ನು ಎತ್ತಿಕೊಳ್ಳಿರಿ,
ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ;
ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ.
ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು,
ಅವರ ದೇವಾಲಯದ ಪ್ರತಿದಂಡನೆಯಾಗಿದೆ.
12 ಬಾಬಿಲೋನಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ;
ಪಹರೆಯನ್ನು ಬಲಪಡಿಸಿರಿ;
ಕಾವಲುಗಾರರನ್ನು ನಿಲ್ಲಿಸಿರಿ;
ಹೊಂಚಿಕೊಳ್ಳುವವರನ್ನು ಸಿದ್ಧಮಾಡಿರಿ;
ಏಕೆಂದರೆ ಯೆಹೋವ ದೇವರು ಬಾಬಿಲೋನಿನ ನಿವಾಸಿಗಳಿಗೆ ವಿರೋಧವಾಗಿ
ತಾನು ಹೇಳಿದ್ದನ್ನು ಯೋಚಿಸಿದ್ದನ್ನು ಮಾಡಿದ್ದಾರೆ.
13 ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ,
ಬಹಳ ದ್ರವ್ಯಗಳುಳ್ಳವಳೇ,
ನಿನ್ನ ಅಂತ್ಯವೂ,
ನಿನ್ನ ನಾಶನದ ಕಾಲವು ಬಂತು.
14 ಸೇನಾಧೀಶ್ವರ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟು:
ನಿಶ್ಚಯವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುತ್ತೇನೆಂದು
ಅವರು ನಿನಗೆ ವಿರೋಧವಾಗಿ ಆರ್ಭಟವನ್ನು ಎತ್ತುವರು.
 
15 “ಅವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ,
ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ,
ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ.
16 ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ,
ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ.
ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ;
ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.
 
17 “ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ;
ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ;
ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ;
ಅವುಗಳಲ್ಲಿ ಉಸಿರೇ ಇಲ್ಲ.
18 ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ;
ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು.
19 ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ;
ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ,
ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ.
ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.
 
20 “ನೀನು ನನ್ನ ಗದೆಯೂ,
ನನ್ನ ಯುದ್ಧದ ಆಯುಧಗಳೇ,
ನಿನ್ನಿಂದ ಜನಾಂಗಗಳನ್ನು ಚೂರುಚೂರಾಗಿ ಒಡೆದು ಬಿಡುತ್ತೇನೆ,
ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ.
21 ನಿನ್ನಿಂದ ಕುದುರೆಯನ್ನೂ, ಅದರ ಮೇಲೆ ಹತ್ತಿದವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ;
ನಿನ್ನಿಂದ ರಥವನ್ನೂ, ಅದರಲ್ಲಿ ಸವಾರಿ ಮಾಡುವವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
22 ನಿನ್ನಿಂದ ಗಂಡಸರನ್ನೂ, ಹೆಂಗಸರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ;
ನಿನ್ನಿಂದ ಹಿರಿಯರನ್ನೂ, ಕಿರಿಯರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ;
ನಿನ್ನಿಂದ ಯುವಕನನ್ನೂ ಯುವತಿಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
23 ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ;
ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ;
ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.
24 “ಬಾಬಿಲೋನಿನವರು ಮತ್ತು ಕಸ್ದೀಯರು ಚೀಯೋನಿನಲ್ಲಿ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು” ಎಂದು ಯೆಹೋವ ದೇವರು ಹೇಳುತ್ತಾರೆ.
25 “ಲೋಕವನ್ನೆಲ್ಲಾ ನಾಶಮಾಡುವ ನಾಶಕ ಪರ್ವತವೇ,
ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ”
ಎಂದು ಯೆಹೋವ ದೇವರು ಹೇಳುತ್ತಾರೆ.
“ನಿನ್ನ ಮೇಲೆ ನನ್ನ ಕೈಯನ್ನು ಚಾಚಿ,
ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ,
ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
26 ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ,
ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು.
ನೀನು ಎಂದೆಂದಿಗೂ ಹಾಳಾಗುವೆ,”
ಎಂದು ಯೆಹೋವ ದೇವರು ಹೇಳುತ್ತಾರೆ.
 
27 “ದೇಶದಲ್ಲಿ ಧ್ವಜವನ್ನೆತ್ತಿರಿ;
ಜನಾಂಗಗಳಲ್ಲಿ ತುತೂರಿಯನ್ನೂದಿರಿ;
ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ;
ಅರಾರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು
ಅದಕ್ಕೆ ವಿರೋಧವಾಗಿ ಕರೆಯಿರಿ;
ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ;
ಬಿರುಸಾದ ಮಿಡತೆ ದಂಡಿನಂತೆ ಕುದುರೆಗಳನ್ನು ಬರಮಾಡಿರಿ.
28 ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ,
ಮೇದ್ಯರ ಅರಸರನ್ನೂ,
ಅದರ ಅಧಿಪತಿಗಳನ್ನೂ, ಅಧಿಕಾರಿಗಳನ್ನೂ,
ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
29 ಆಗ ದೇಶವು ನೊಂದು ನಡುಗುವುದು.
ಏಕೆಂದರೆ ಬಾಬಿಲೋನ್ ದೇಶವು
ನಿರ್ಜನವಾಗಲಿ ಎಂದು ಅದರ ವಿರೋಧವಾಗಿ
ಯೆಹೋವ ದೇವರ ಉದ್ದೇಶಗಳು ಸ್ಥಿರವಾಗಿವೆ.
30 ಬಾಬಿಲೋನಿನ ಪರಾಕ್ರಮಶಾಲಿಗಳು ಯುದ್ಧಮಾಡುವುದನ್ನು ಬಿಟ್ಟಿದ್ದಾರೆ;
ಅವರ ಭದ್ರಸ್ಥಾನಗಳಲ್ಲಿ ನಿಂತಿದ್ದಾರೆ.
ಅವರ ಪರಾಕ್ರಮತನ ತಪ್ಪಿತು;
ಅವರು ಬಲಹೀನರಾಗಿದ್ದಾರೆ.
ಆ ದೇಶದ ನಿವಾಸಗಳನ್ನು ಸುಟ್ಟಿದ್ದಾರೆ;
ಅದರ ಹೆಬ್ಬಾಗಿಲುಗಳು ಮುರಿದುಹೋಗಿವೆ.
31 ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನ ಕಡೆ ಓಡುತ್ತಾನೆ.
ಒಬ್ಬ ದೂತ ಇನ್ನೊಬ್ಬ ದೂತನ ಕಡೆಗೆ ಓಡಿಹೋಗಿ,
ಬಾಬಿಲೋನಿನ ಅರಸನಿಗೆ ಈ ಸಮಾಚಾರವನ್ನು ತಿಳಿಸುತ್ತಾನೆ,
ನಿನ್ನ ರಾಜಧಾನಿಯನ್ನು ಎಲ್ಲಾ ಕಡೆಯಿಂದ ಆಕ್ರಮಿಸಿದ್ದಾರೆ,
32 ಹಾಯ್ಗಡಗಳನ್ನು ಹಿಡಿದಿದ್ದಾರೆ,
ಜೊಂಡು ಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ,
ರಣವೀರರು ಬೆಚ್ಚಿಬಿದ್ದಿದ್ದಾರೆ.”
33 ಏಕೆಂದರೆ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ:
“ತುಳಿಯುವ ವೇಳೆಯಲ್ಲಿ ಕಣವು ಹೇಗೋ,
ಹಾಗೆಯೇ ಬಾಬಿಲೋನಿನ ಮಗಳು ಇದ್ದಾಳೆ.
ಇನ್ನು ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಸುಗ್ಗಿಕಾಲ ಬರುವುದು.”
 
34 “ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮ್ಮನ್ನು ನುಂಗಿಬಿಟ್ಟಿದ್ದಾನೆ.
ನಮ್ಮನ್ನು ಜಜ್ಜಿದ್ದಾನೆ.
ನಮ್ಮನ್ನು ಬರೀ ಪಾತ್ರೆಯಾಗಿ ಮಾಡಿದ್ದಾನೆ.
ಘಟಸರ್ಪದ ಹಾಗೆ ನಮ್ಮನ್ನು ನುಂಗಿಬಿಟ್ಟಿದ್ದಾನೆ.
ನಮ್ಮನ್ನು ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ.
ನಮ್ಮನ್ನು ಉಗುಳಿಬಿಟ್ಟಿದ್ದಾನೆ.
35 ನಮಗೂ, ನಮ್ಮ ಶರೀರಕ್ಕೂ ಮಾಡಿರುವ ಬಲಾತ್ಕಾರವು
ಬಾಬಿಲೋನಿನ ಮೇಲೆ ಇರಲಿ,” ಎಂದು ಚೀಯೋನ್ ನಿವಾಸಿಗಳು ಹೇಳುತ್ತಾರೆ;
“ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ,”
ಎಂದು ಯೆರೂಸಲೇಮು ಹೇಳುವುದು.
36 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ.
“ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ.
ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ.
ಅದರ ಸಮುದ್ರವನ್ನು ಒಣಗಿಸುತ್ತೇನೆ.
ಅದರ ಬುಗ್ಗೆಯನ್ನು ಬತ್ತಿಹೋಗುವಂತೆ ಮಾಡುತ್ತೇನೆ.
37 ಬಾಬಿಲೋನ್ ದಿಬ್ಬಗಳಾಗುವುದು.
ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವಾಗಿ
ಆಶ್ಚರ್ಯಕ್ಕೂ, ನಾಶಕ್ಕೂ,
ಸಿಳ್ಳಿಡುವಿಕೆಗೂ ಒಳಗಾಗುವುದು.
38 ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು.
ಸಿಂಹಗಳ ಮರಿಗಳ ಹಾಗೆ ಶಬ್ದಮಾಡುವರು.
39 ಅವರು ಉರಿಗೊಂಡಿರುವಾಗ,
ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ,
ಅವರು ಅದರಿಂದ ಸಂಭ್ರಮಪಟ್ಟು,
ಎಂದಿಗೂ ಎಚ್ಚರಗೊಳ್ಳದೆ,
ದೀರ್ಘ ನಿದ್ರೆ ಮಾಡುವಂತೆ ತಲೆಗೇರುವತನಕ ಕುಡಿಸುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
40 “ಕುರಿ, ಟಗರು, ಹೋತಗಳ ಹಾಗೆ
ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು.
ಇದು ಯೆಹೋವನಾದ ನನ್ನ ನುಡಿ.
 
41 “ಶೇಷಕ್ ಹೇಗೆ ಶತ್ರುವಶವಾಗಿದೆ,
ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ;
ಬಾಬಿಲೋನ್ ಜನಾಂಗಗಳೊಳಗೆ
ಹೇಗೆ ಎಷ್ಟು ನಿರ್ಜನವಾಯಿತು!
42 ಸಮುದ್ರವೇ ಬಾಬಿಲೋನಿನ ಮೇಲೆ ನುಗ್ಗಿಬಿಟ್ಟಿದೆ,
ಲೆಕ್ಕವಿಲ್ಲದೆ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
43 ಕಾಡು, ಕಗ್ಗಾಡು, ಬೆಂಗಾಡು
ಆಗಿವೆ ಅದರ ನಗರಗಳು.
ಆ ದೇಶದೊಳು ಯಾರೂ ವಾಸಿಸರು,
ಯಾವ ಮನುಷ್ಯನೂ ಹಾದು ಹೋಗನು.
44 ಏಕೆಂದರೆ ನಾನು ಬಾಬಿಲೋನಿನಲ್ಲಿರುವ ಬೇಲ್‌ನನ್ನು ದಂಡಿಸಿ,
ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ಕಕ್ಕಿಸುವೆನು.
ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವುದಿಲ್ಲ.
ಹೌದು, ಬಾಬಿಲೋನಿನ ಗೋಡೆ ಬೀಳುವುದು.
 
45 “ನನ್ನ ಜನರೇ, ಅದರೊಳಗಿಂದ ಹೊರಡಿರಿ.
ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು
ಯೆಹೋವ ದೇವರ ಕೋಪಕ್ಕೆ ತಪ್ಪಿಸಿರಿ.
46 ನಿಮ್ಮ ಹೃದಯವು ಕುಂದದ ಹಾಗೆ
ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಗೆ ನೀವು ಭಯಪಡದ ಹಾಗೆ,
ಒಂದು ವರ್ಷದಲ್ಲಿ ಒಂದು ಸುದ್ದಿಯೂ
ಇನ್ನೊಂದು ವರ್ಷದಲ್ಲಿ ಇನ್ನೊಂದು ಸುದ್ದಿಯೂ ಬರುವುದು.
ದೇಶದಲ್ಲಿ ಬಲಾತ್ಕಾರವಿರುವುದು,
ಆಳುವವನು ಆಳುವವನಿಗೆ ವಿರೋಧವಾಗಿರುವನು.
47 ಆದ್ದರಿಂದ ಇಗೋ, ದಿನಗಳು ಬರುವುವು.
ಆಗ ನಾನು ಬಾಬಿಲೋನಿನ ವಿಗ್ರಹಗಳಿಗೆ ದಂಡಿಸುವೆನು.
ಆದರೆ ದೇಶವೆಲ್ಲಾ ನಾಚಿಕೆಪಡುವುದು.
ಹತರಾದವರ ದೇಹಗಳು ಅದರ ಮಧ್ಯದಲ್ಲಿ ಅಲ್ಲಿ ಇಲ್ಲಿ ಬಿದ್ದಿವೆ.
48 ಆಗ ಭೂಮಿ ಆಕಾಶಗಳೂ,
ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶವನ್ನು ನೋಡಿ
ಜಯಘೋಷ ಮಾಡುವುವು.
ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
 
49 “ಬಾಬಿಲೋನ್‌ನಿಂದಾಗಿ ಭೂಮಿಯಲ್ಲೆಲ್ಲಾ ಹತರಾದಂತೆಯೇ,
ಇಸ್ರಾಯೇಲಿನ ಹತ್ಯೆಯಿಂದಾಗಿ ಬಾಬಿಲೋನ್ ಬೀಳಬೇಕು.
50 ಖಡ್ಗದಿಂದ ತಪ್ಪಿಸಿಕೊಂಡವರೇ,
ನಡೆಯಿರಿ, ನಿಲ್ಲಬೇಡಿರಿ.
ದೂರದಲ್ಲಿ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ,
ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.”
 
51 “ನಾಚಿಕೆ ಪಡುತ್ತೇವೆ,
ಏಕೆಂದರೆ ನಿಂದೆಯನ್ನು ಕೇಳಿದ್ದೇವೆ.
ಅವಮಾನ ನಿಮ್ಮ ಮುಖಗಳನ್ನು ಮುಚ್ಚಿದೆ.
ಏಕೆಂದರೆ ವಿದೇಶಿಗಳು ಯೆಹೋವ ದೇವರ ಆಲಯದ
ಪರಿಶುದ್ಧ ಸ್ಥಳಗಳಲ್ಲಿ ಪ್ರವೇಶಿಸಿದ್ದಾರೆ.”
 
52 “ಇಗೋ, ಅಂಥ ದಿನಗಳು ಬರುತ್ತವೆ,” ಎಂದು ಯೆಹೋವ ದೇವರು ಹೇಳುತ್ತಾರೆ,
“ಅದು ನಾನು ಬಾಬಿಲೋನಿನ ವಿಗ್ರಹಗಳನ್ನು
ದಂಡಿಸುವ ದಿನಗಳು.
ಆಗ ಆ ದೇಶದೊಳೆಲ್ಲ ಗಾಯಪಟ್ಟವರು ನರಳಾಡುವರು.
53 ಬಾಬಿಲೋನ್ ಆಕಾಶಕ್ಕೆ ಏರಿದರೂ,
ಅದರ ಬಲದ ಉನ್ನತಸ್ಥಾನವನ್ನು ಭದ್ರಮಾಡಿದರೂ,
ಸೂರೆಮಾಡುವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
 
54 “ಬಾಬಿಲೋನಿನಿಂದ ಕೂಗುವ ಶಬ್ದವು!
ಕಸ್ದೀಯರ ದೇಶದಿಂದ ದೊಡ್ಡ ನಾಶದ ಶಬ್ದವೂ ಬರುವುದು.
55 ಏಕೆಂದರೆ ಯೆಹೋವ ದೇವರು ಬಾಬಿಲೋನನ್ನು ಸೂರೆಮಾಡಿದ್ದಾರೆ;
ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿದ್ದಾರೆ;
ಅವಳ ತೆರೆಗಳು ನೀರಿನ ಹಾಗೆ ಘೋಷಿಸುವಾಗ,
ಅವುಗಳ ಶಬ್ದದ ಧ್ವನಿಯು ಹೊರಟಿತು.
56 ಏಕೆಂದರೆ ವಿನಾಶ ಮಾಡುವವನು ಅದರ ಮೇಲೆ ಅಂದರೆ ಬಾಬಿಲೋನಿನ ಮೇಲೆಯೇ ಬಂದಿದ್ದಾನೆ.
ಅದರ ಪರಾಕ್ರಮಶಾಲಿಗಳು ಸೆರೆಯಾಗಿಬಿಟ್ಟಿದ್ದಾರೆ.
ಅವಳ ಬಿಲ್ಲುಗಳು ಮುರಿದುಹೋಗಿವೆ.
ಏಕೆಂದರೆ ಪ್ರತಿದಂಡನೆಗಳ ದೇವರಾದ ಯೆಹೋವ ದೇವರು ನಿಶ್ಚಯವಾಗಿ
ಮುಯ್ಯಿಗೆ ಮುಯ್ಯಿ ತೀರಿಸುವರು.
57 ಇದಲ್ಲದೆ ನಾನು ಅವಳ ಪ್ರಧಾನರನ್ನೂ,
ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ,
ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ.
ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,”
ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ.
58 ಮಾತ್ರವಲ್ಲದೆ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ:
“ಬಾಬಿಲೋನಿನ ಅಗಲವಾದ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು.
ಅವಳ ಎತ್ತರವಾದ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗುವುವು;
ಜನರು ವ್ಯರ್ಥಕ್ಕಾಗಿಯೂ,
ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸಪಡುವರು.”
59 ಪ್ರವಾದಿಯಾದ ಯೆರೆಮೀಯನು ಮಹ್ಸೇಯನ ಮಗನಾದ ನೇರೀಯನ ಮಗ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಾಬಿಲೋನಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಅಂಗರಕ್ಷಕ ಸೇನೆಯ ನಾಯಕನಾಗಿದ್ದನು. 60 ಹೀಗೆ ಯೆರೆಮೀಯನು ಬಾಬಿಲೋನಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬಿಲೋನಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಗ್ರಂಥದಲ್ಲಿ ಬರೆದನು. 61 ಯೆರೆಮೀಯನು ಸೆರಾಯನಿಗೆ ಹೇಳಿದ್ದೇನೆಂದರೆ, “ನೀನು ಬಾಬಿಲೋನಿಗೆ ಬಂದು 62 ಈ ವಾಕ್ಯಗಳನ್ನೆಲ್ಲಾ ಓದುತ್ತಿರುವಾಗ ಹೇಳತಕ್ಕದ್ದೇನೆಂದರೆ, ‘ಓ ಯೆಹೋವ ದೇವರೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯರಾಗಲಿ, ಮೃಗಗಳಾಗಲಿ, ನಿವಾಸಿಗಳಾಗಲಿ ಎಂದಿಗೂ ಇರದಂತೆ, ಅದು ಸದಾಕಾಲ ಹಾಳಾಗಿಯೇ ಉಳಿಯಲಿ,’ ಎಂದು ನೀವೇ ಮಾತನಾಡ್ದಿದೀರಿ. 63 ನೀನು ಈ ಗ್ರಂಥವನ್ನು ಓದಿ ಮುಗಿಸಿದ ಮೇಲೆ, ಅದಕ್ಕೆ ಕಲ್ಲು ಕಟ್ಟಿ, ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ, 64 ಹೀಗೆ ಹೇಳು, ‘ಈ ಪ್ರಕಾರ ಬಾಬಿಲೋನ್ ಮುಳುಗಿ ಹೋಗುವುದು. ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು. ಅವರು ಬೀಳುವರು.’ ”
 
 
ಇಲ್ಲಿಯ ತನಕ ಯೆರೆಮೀಯನ ವಾಕ್ಯಗಳು.
 

*51:1 51:1 ಲೇಬ್ ಕಾಮೈ ರಹಸ್ಯ ಭಾಷೆಯಲ್ಲಿ ಬಾಬಿಲೋನ್.