47
ಫಿಲಿಷ್ಟಿಯರನ್ನು ಕುರಿತು ಸಂದೇಶ
1 ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
2 ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ,
ಅದು ತುಂಬಿ ತುಳುಕುವ ಪ್ರಳಯವಾಗುವುದು;
ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ,
ಅದರ ನಿವಾಸಿಗಳನ್ನೂ ಆಕ್ರಮಿಸುವುವು;
ಆಗ ಮನುಷ್ಯರು ಕೂಗುವರು;
ದೇಶದ ನಿವಾಸಿಗಳೆಲ್ಲರು ಗೋಳಾಡುವರು.
3 ಅವನ ಬಲವಾದ ಕುದುರೆಗಳ ಗೊರಸುಗಳ
ತುಳಿಯುವಿಕೆಯ ಶಬ್ದದಿಂದಲೂ
ಅವನ ರಥಗಳ ಘೋಷದಿಂದಲೂ
ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ
ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.
4 ಏಕೆಂದರೆ ಫಿಲಿಷ್ಟಿಯರೆಲ್ಲರನ್ನು
ಸೂರೆ ಮಾಡುವುದಕ್ಕೂ ಟೈರಿನಿಂದಲೂ
ಸೀದೋನಿನಿಂದಲೂ ಉಳಿದವರನ್ನು
ಕಡಿದುಬಿಡುವುದಕ್ಕೂ ಆ ದಿವಸ ಬಂತು.
ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು
ಕಫ್ತೋರಿನ* 47:4 ಅದು, ಕ್ರೇತ ದೇಶದ ಉಳಿದವರನ್ನೂ ಸೂರೆಮಾಡುವನು.
5 ಗಾಜಾ ಊರು ಬೋಳಿಸಿಕೊಂಡಿದೆ.
ಅಷ್ಕೆಲೋನ್ ನಾಶನ ಹೊಂದಿದೆ.
ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ
ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?
6 “ಅಯ್ಯೋ, ಯೆಹೋವ ದೇವರ ಖಡ್ಗವೇ,
ಎಷ್ಟರವರೆಗೆ ವಿಶ್ರಮಿಸಿಕೊಳ್ಳದೇ ಇರುವಿ?
ನಿನ್ನ ಒರೆಯಲ್ಲಿ ಅಡಗಿಕೋ;
ವಿಶ್ರಮಿಸಿಕೋ, ಸುಮ್ಮನಿರು.
7 ಅದು ಹೇಗೆ ಸುಮ್ಮನಿರುವುದು?
ಅಷ್ಕೆಲೋನಿಗೆ ವಿರೋಧವಾಗಿ ಮತ್ತು
ಸಮುದ್ರ ತೀರಕ್ಕೆ ವಿರೋಧವಾಗಿ ಯೆಹೋವ ದೇವರೇ ಅದಕ್ಕೆ ಆಜ್ಞಾಪಿಸಿದ್ದಾರಲ್ಲಾ?
ಅಲ್ಲಿ ಅದನ್ನು ನೇಮಿಸಿದ್ದಾನೆ.”