10
ಕ್ರಿಸ್ತ ಯೇಸುವಿನ ಒಂದೇ ಯಜ್ಞವು ಸದಾಕಾಲಕ್ಕೂ ಸಾರ್ಥಕವಾದದ್ದು
1 ಮೋಶೆಯ ನಿಯಮವು ಬರಬೇಕಾಗಿದ್ದ ವಸ್ತುಗಳ ಛಾಯೆಯಾಗಿದೆ ಹೊರತು ಅವುಗಳ ನಿಜಸ್ವರೂಪವಲ್ಲ. ಈ ಕಾರಣದಿಂದ ಅದು ಪ್ರತಿವರ್ಷ ಯಾವಾಗಲೂ ಯಜ್ಞಗಳನ್ನು ಅರ್ಪಿಸುವುದಕ್ಕೆ ಬರುವವರನ್ನು ಮೋಶೆಯ ನಿಯಮವು ಎಂದಿಗೂ ಪರಿಪೂರ್ಣತೆಗೆ ತರಲಾರದು. 2 ಒಂದು ವೇಳೆ ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಪಾಪದಿಂದ ಶುದ್ಧೀಕರಣ ಹೊಂದಿದ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ. 3 ಆ ಯಜ್ಞಗಳು ಪ್ರತಿವರ್ಷವೂ ಪಾಪಗಳ ಜ್ಞಾಪಕವನ್ನು ಉಂಟುಮಾಡುತ್ತಿತ್ತು. 4 ಏಕೆಂದರೆ ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದುಹಾಕುವುದು ಅಸಾಧ್ಯ.
5 ಆದ್ದರಿಂದ ಕ್ರಿಸ್ತ ಯೇಸು ಭೂಲೋಕದೊಳಗೆ ಬಂದಾಗ,
“ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ,
ಆದರೆ ನನಗೆ ದೇಹವನ್ನು ಸಿದ್ಧಮಾಡಿ ಕೊಟ್ಟಿರುವೆ;
6 ದಹನಬಲಿಗಳಲ್ಲಿಯೂ ಪಾಪಪರಿಹಾರ ಬಲಿಗಳಲ್ಲಿಯೂ
ನೀನು ಸಂತೋಷಪಡುವುದಿಲ್ಲ.
7 ಆಗ ನಾನು ಹೀಗೆಂದೆನು, ‘ಓ, ದೇವರೇ, ಪವಿತ್ರ ವೇದದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವಂತೆ
ನಾನು ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ.’ ”* 10:7 ಕೀರ್ತನೆ 40:6-8
8 ಮೋಶೆಯ ನಿಯಮದ ಪ್ರಕಾರವಾಗಿ ಅರ್ಪಿಸಲಾಗುತ್ತಿದ್ದಂತೆಯೇ, “ಯಜ್ಞವೂ ಅರ್ಪಣೆಯೂ ದಹನಬಲಿಗಳೂ ಪಾಪ ಪರಿಹಾರದ ಬಲಿಯೂ ನಿಮಗೆ ಇಷ್ಟವಾಗಿರಲಿಲ್ಲ. ಅವುಗಳಲ್ಲಿ ನಿಮಗೆ ಸಂತೋಷವಿರಲಿಲ್ಲ,” ಎಂದು ಮೊದಲು ಅವರು ಹೇಳಿ, 9 ತರುವಾಯ, “ಇಗೋ, ದೇವರೇ, ನಿಮ್ಮ ಚಿತ್ತವನ್ನು ನೆರವೇರಿಸಲು ಬಂದಿದ್ದೇನೆ!” ಎಂದು ಹೇಳಿದ್ದಾರೆ. ಹೀಗೆ ಅವರು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ರದ್ದು ಮಾಡಿದ್ದಾರೆ. 10 ಹೀಗೆ ಒಂದೇ ಸಾರಿ ಎಲ್ಲಾ ಕಾಲಕ್ಕೂ ಕ್ರಿಸ್ತ ಯೇಸು ತಮ್ಮ ದೇಹವನ್ನು ಸಮರ್ಪಿಸಿದ್ದರ ಮೂಲಕ ದೇವರ ಚಿತ್ತವನ್ನು ನೆರವೇರಿಸಿ, ನಮ್ಮನ್ನು ಶುದ್ಧರನ್ನಾಗಿ ಮಾಡಿದ್ದಾರೆ.
11 ಇದಲ್ಲದೆ ಪ್ರತಿ ಯಾಜಕನು ಅನುದಿನವೂ ಸೇವೆಮಾಡುತ್ತಾ ನಿಂತಿರುವನು. ಆದರೆ ಎಂದಿಗೂ ಪಾಪಗಳನ್ನು ತೆಗೆದುಹಾಕಲಾರದಂಥ ಯಜ್ಞಗಳನ್ನು ಪದೇಪದೇ ಅರ್ಪಿಸುತ್ತಿದ್ದನು. 12 ಕ್ರಿಸ್ತ ಯೇಸುವು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡರು. 13 ಅಂದಿನಿಂದ ತಮ್ಮ ವಿರೋಧಿಗಳನ್ನು ತಮ್ಮ ಪಾದಪೀಠವಾಗಿ ಮಾಡಿಕೊಳ್ಳುವ ತನಕ ಕ್ರಿಸ್ತ ಯೇಸು ಕಾಯುತ್ತಿರುವರು. 14 ಏಕೆಂದರೆ ಕ್ರಿಸ್ತ ಯೇಸುವು ಒಂದೇ ಬಲಿ ಅರ್ಪಣೆಯಿಂದ ಪವಿತ್ರವಾಗುವವರನ್ನು ನಿರಂತರ ಪರಿಪೂರ್ಣರನ್ನಾಗಿ ಮಾಡಿದ್ದಾರೆ.
15 ಪವಿತ್ರಾತ್ಮ ದೇವರು ಸಹ ನಿಮಗೆ ಸಾಕ್ಷಿ ಕೊಡುವವರಾಗಿ,
16 “ಆ ದಿನಗಳ ತರುವಾಯ,
ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು:
ನಾನು ನನ್ನ ನಿಯಮಗಳನ್ನು ಅವರ ಹೃದಯಗಳಲ್ಲಿ ಇಡುವೆನು.
ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು, ಎಂದು ಕರ್ತದೇವರು ಹೇಳುತ್ತಾರೆ.”† 10:16 ಯೆರೆ 31:33
17 ತರುವಾಯ ಅವರು,
“ನಾನು ಅವರ ಪಾಪಗಳನ್ನೂ ಅಧರ್ಮಗಳನ್ನೂ
ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ!”‡ 10:17 ಯೆರೆ 31:34
ಎಂದು ಹೇಳುತ್ತಾರೆ.
18 ಆದ್ದರಿಂದ, ಈಗ ಕ್ಷಮಾಪಣೆಯಾದ ಬಳಿಕ ಪಾಪ ಪರಿಹಾರದ ಬಲಿಯ ಅವಶ್ಯಕತೆ ಇಲ್ಲ.
ವಿಶ್ವಾಸದಲ್ಲಿರಲು ಕರೆ
19 ಆದ್ದರಿಂದ ಪ್ರಿಯರೇ, ಯೇಸುವಿನ ರಕ್ತದಿಂದ ಅವರ ದೇಹವೆಂಬ ಪರದೆಯ ಮೂಲಕ ನಮಗೆ ತೆರೆಯಲಾದ 20 ಹೊಸ ಹಾಗೂ ಸಜೀವವಾದ ಮಾರ್ಗವಿರುವುದರಿಂದ ಅತಿಪರಿಶುದ್ಧವಾದ ಸ್ಥಳವನ್ನು ಪ್ರವೇಶಿಸಲು ಭರವಸೆಯಿದೆ. 21 ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವುದರಿಂದ 22 ಆದಕಾರಣ ಅಪರಾಧ ಮನಸ್ಸಾಕ್ಷಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ಶುದ್ಧ ನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಸಮೀಪಕ್ಕೆ ಬರೋಣ. 23 ನಾವು ನಮ್ಮ ನಿರೀಕ್ಷೆಯ ಅರಿಕೆಯನ್ನು ಚಂಚಲರಾಗದೆ ಬಿಗಿಯಾಗಿ ಹಿಡಿಯೋಣ. ಏಕೆಂದರೆ ವಾಗ್ದಾನ ಮಾಡಿದವರು ನಂಬಿಗಸ್ತರು. 24 ನಾವು ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿಯೂ ಸತ್ಕಾರ್ಯ ಮಾಡುವುದಕ್ಕಾಗಿಯೂ ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕೆಂದು ಯೋಚಿಸೋಣ. 25 ಸಭೆಯಾಗಿ ಸೇರುವುದನ್ನು ಕೆಲವರಿಗೆ ರೂಢಿಯಾಗಿ ಬಿಟ್ಟಂತೆ, ನಾವು ಹಾಗೆ ಮಾಡದಿರೋಣ. ಕರ್ತ ಯೇಸುವಿನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ತಿಳಿದಿರುವುದರಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಗೊಳಿಸುವುದನ್ನು ಇನ್ನೂ ಹೆಚ್ಚಾಗಿ ಮಾಡಿರಿ.
26 ಏಕೆಂದರೆ, ನಾವು ಸತ್ಯದ ಅರಿವನ್ನು ಹೊಂದಿದ ಮೇಲೆ ಬೇಕೆಂದು ಪಾಪ ಮಾಡುತ್ತಾ ಇದ್ದರೆ, ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ. 27 ಆದರೆ ಖಂಡಿತವಾಗಿ ಎದುರು ನೋಡತಕ್ಕ ಭಯಂಕರವಾದ ನ್ಯಾಯತೀರ್ಪು ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಇರುವುವು. 28 ಮೋಶೆಯ ನಿಯಮವನ್ನು ಅಸಡ್ಡೆ ಮಾಡಿದವನಿಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕರುಣೆಯಿಲ್ಲದೆ ಮರಣದಂಡನೆಯಾಗುತ್ತಿತ್ತು. 29 ಯಾವನು ದೇವಪುತ್ರರನ್ನೇ ತುಳಿದು ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಪವಿತ್ರಾತ್ಮ ದೇವರನ್ನು ತಿರಸ್ಕಾರ ಮಾಡಿದ್ದಾನೋ, ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗುವನೆಂಬುದನ್ನು ಯೋಚಿಸಿರಿ. 30 ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,”§ 10:30 ಧರ್ಮೋ 32:35 ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,”* 10:30 ಧರ್ಮೋ 32:36; ಕೀರ್ತನೆ 135:14 ಎಂದೂ ಹೇಳಲಾಗಿದೆ. 31 ಸಜೀವ ದೇವರ ಕೈಯಲ್ಲಿ ಬೀಳುವುದು ಭಯಂಕರವಾದದ್ದು.
32 ಆದರೆ ನೀವು ಬೆಳಕನ್ನು ಹೊಂದಿದ ಮೇಲೆ ಬಾಧೆಗಳ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪುಮಾಡಿಕೊಳ್ಳಿರಿ. 33 ಕೆಲವು ಸಾರಿ ನೀವು ನಿಂದೆಗಳನ್ನೂ ಉಪದ್ರವಗಳನ್ನೂ ಅನುಭವಿಸಿ ಬಹಿರಂಗ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸುವವರ ಭಾಗಿಗಳಾದಿರಿ. 34 ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಸ್ಥಿರವಾದ ಉತ್ತಮ ಆಸ್ತಿಯಿದೆ ಎಂದು ತಿಳಿದು, ನಿಮ್ಮ ಆಸ್ತಿ ಸುಲಿಗೆಯಾದಾಗ ಸಂತೋಷವಾಗಿ ಬಿಟ್ಟುಕೊಟ್ಟಿದ್ದೀರಿ. 35 ಮಹಾ ಪ್ರತಿಫಲ ನಿಮಗಿರುವುದರಿಂದ ನಿಮ್ಮ ಧೈರ್ಯವನ್ನು ಕಳೆದುಕೊಳ್ಳಬೇಡಿರಿ.
36 ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ಅವರು ಮಾಡಿದ ವಾಗ್ದಾನವನ್ನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ: 37 ಏಕೆಂದರೆ,
“ಇನ್ನು ಸ್ವಲ್ಪ ಸಮಯದಲ್ಲಿಯೇ,
ಬರಲಿರುವ ಒಬ್ಬರು ಬಂದೇ ಬರುವರು.
ಅವರು ತಡಮಾಡುವುದಿಲ್ಲ.”† 10:37 ಯೆಶಾಯ 26:20; ಹಬ 2:3
38 ಆದರೆ,
“ನನ್ನ ನೀತಿವಂತನು ನಂಬಿಕೆಯಿಂದಲೇ ಬದುಕುವನು,
ಅವನು ಹಿಂಜರಿದರೆ,
ಅವನಲ್ಲಿ ನನಗೆ ಸಂತೋಷವಿರುವುದಿಲ್ಲ.”‡ 10:38 ಹಬ 2:4
39 ನಾವಾದರೋ ಹಿಂಜರಿದು ನಾಶವಾಗುವವರಲ್ಲ, ನಂಬುವವರಾಗಿ ಆ ರಕ್ಷಣೆಯನ್ನು ಹೊಂದುವವರಾಗಿದ್ದೇವೆ.