23
1 ನೀನು ಅಧಿಪತಿಯ ಸಂಗಡ ಊಟಕ್ಕೆ ಕುಳಿತುಕೊಂಡಿರುವಾಗ,
ನಿನ್ನ ಮುಂದಿಟ್ಟಿರುವುದರ ಬಗ್ಗೆ ಎಚ್ಚರಿಕೆಯಾಗಿರು.* 23:1 ನಿನ್ನ ಮುಂದಿಟ್ಟಿರುವುದರ ಬಗ್ಗೆ ಎಚ್ಚರಿಕೆಯಾಗಿರು. ಅಥವಾ ಯಾರ ಸನ್ನಿಧಾನದಲ್ಲಿ ಇದ್ದೀ ಎಂಬುದನ್ನು ಮರೆಯದಿರು ಅಥವಾ ಯಾರ ಮುಂದಿರುವೆ ಎಂಬುದನ್ನು ಮರೆಯದಿರು.
2 ನೀನು ಹೊಟ್ಟೆಬಾಕನಾಗಿದ್ದರೆ,
ನಿನ್ನ ಗಂಟಲಿಗೆ ಕತ್ತಿಹಾಕಿಕೋ.
3 ಅವನ ರುಚಿಪದಾರ್ಥಗಳನ್ನು ಬಯಸಬೇಡ,
ಅದು ಮೋಸದ ಆಹಾರವೇ ಸರಿ.
4 ದುಡ್ಡಿನಾಶೆಯಿಂದ ದುಡಿಯಬೇಡ,
ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
5 ನಿನ್ನ ದೃಷ್ಟಿಯು ಐಶ್ವರ್ಯದ ಮೇಲೆ ಎರಗುತ್ತದೋ?
ಐಶ್ವರ್ಯವು ಅಷ್ಟರೊಳಗೆ ಮಾಯವಾಗುವುದು,
ಆಕಾಶದ ಕಡೆಗೆ ಹಾರುವ ಹದ್ದಿನಂತೆ,
ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.
6 ಲೋಭಿಯ ಅನ್ನವನ್ನು ಉಣ್ಣದಿರು,
ಅವನ ರುಚಿಪದಾರ್ಥಗಳನ್ನು ಬಯಸಬೇಡ.
7 ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ,
ಉಣ್ಣು, ಕುಡಿ ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ.
8 ನೀನು ತಿಂದ ತುತ್ತನ್ನು ಕಕ್ಕಿಬಿಡುವಿ,
ನಿನ್ನ ಸವಿಮಾತುಗಳು ವ್ಯರ್ಥ.
9 ಮೂಢನ ಸಂಗಡ ಮಾತನಾಡಬೇಡ,
ನಿನ್ನ ಮಾತುಗಳ ವಿವೇಕವನ್ನು ತಿರಸ್ಕರಿಸುವನು.
10 ಪೂರ್ವಕಾಲದ ಮೇರೆಯನ್ನು ತೆಗೆದುಹಾಕಬೇಡ,
ಅನಾಥರ ಹೊಲಗಳಲ್ಲಿ ನುಗ್ಗಬೇಡ.
11 ಅವರ ರಕ್ಷಕನು ಬಲಶಾಲಿಯಾಗಿದ್ದಾನೆ,
ಅವರಿಗಾಗಿ ನಿನ್ನ ಸಂಗಡ ವ್ಯಾಜ್ಯವಾಡುವನು.
12 ಉಪದೇಶವನ್ನು ಮನಸ್ಸಿಗೆ ತೆಗೆದುಕೋ,
ತಿಳಿವಳಿಕೆಯ ಮಾತುಗಳಿಗೆ ಕಿವಿಗೊಡು.
13 ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ,
ಅವನು ಬೆತ್ತದ ಏಟಿಗೆ ಸಾಯನು.
14 ಬೆತ್ತದಿಂದ ಹೊಡೆ,
ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು.
15 ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ
ನನ್ನ ಮನಸ್ಸಿಗೂ ಉಲ್ಲಾಸವಾಗುವುದು.
16 ಹೌದು, ನಿನ್ನ ತುಟಿಗಳು ನೀತಿಯ ನುಡಿಗಳನ್ನಾಡಿದರೆ
ನನ್ನ ಅಂತರಾತ್ಮವು ಹಿಗ್ಗುವುದು.
17 ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ,
ಯೆಹೋವನಲ್ಲಿ ನಿರಂತರವಾಗಿ ಭಯಭಕ್ತಿಯುಳ್ಳವನಾಗಿರು.
18 ಒಂದು ಕಾಲ ಉಂಟು,
ನಿನ್ನ ನಿರೀಕ್ಷೆಯು ನಿರರ್ಥಕವಾಗದು.
19 ಕಂದಾ, ಕೇಳು, ಜ್ಞಾನವಂತನಾಗಿರು,
ನಿನ್ನ ಮನಸ್ಸನ್ನು ಜ್ಞಾನದ ಮಾರ್ಗದಲ್ಲಿ ಮುಂದೆ ನಡೆಯಿಸು.
20 ಕುಡುಕರಲ್ಲಿಯೂ,
ಅತಿಮಾಂಸಭಕ್ಷಕರಲ್ಲಿಯೂ ಸೇರದಿರು.
21 ಕುಡುಕರು, ಹೊಟ್ಟೆಬಾಕರು ದುರ್ಗತಿಗೆ ಬರುವರು,
ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವುದು.
22 ಹೆತ್ತ ತಂದೆಯ ಮಾತಿಗೆ ಕಿವಿಗೊಡು,
ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.
23 ಸತ್ಯವನ್ನು ಎಂದರೆ ಜ್ಞಾನ, ಸುಶಿಕ್ಷೆ, ವಿವೇಕಗಳನ್ನು ಕೊಂಡುಕೋ,
ಮಾರಿ ಬಿಡಬೇಡ.
24 ಧರ್ಮಿಯ ತಂದೆಯು ಅತಿ ಸಂತೋಷಪಡುವನು,
ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು.
25 ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ,
ನಿನ್ನನ್ನು ಹೆತ್ತವಳು ಆನಂದಪಡಲಿ.
26 ಕಂದಾ, ನಿನ್ನ ಹೃದಯವನ್ನು ನನಗೆ ಕೊಡು,
ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.
27 ಸೂಳೆಯು ಆಳವಾದ ಹಳ್ಳ,
ಜಾರಸ್ತ್ರೀಯು ಇಕ್ಕಟ್ಟಾದ ಗುಂಡಿ.
28 ಹೌದು, ಕಳ್ಳನಂತೆ ಹೊಂಚುಹಾಕುತ್ತಾಳೆ,
ಜನರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
29 ಅಯ್ಯಯ್ಯೋ ಅನ್ನುವವರು ಯಾರು?
ಅಕಟಾ ಎಂದು ಕೂಗಿಕೊಳ್ಳುವವರು ಯಾರು?
ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ?
ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ?
ಕೆಂಪೇರಿದ ಕಣ್ಣುಳ್ಳವರು ಯಾರು?
30 ಅವರು ಮಿಶ್ರಮದ್ಯಪಾನಾಸಕ್ತರಾಗಿ,
ದ್ರಾಕ್ಷಾರಸವನ್ನು ಕುಡಿಯುತ್ತಾ, ಕಾಲಹರಣಮಾಡುವವರೇ.
31 ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ
ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ.
ಅದು ಗಂಟಲಿನೊಳಗೆ ಮೆಲ್ಲಗೆ ಇಳಿದುಹೋಗಿ
32 ಆಮೇಲೆ ಹಾವಿನಂತೆ ಕಚ್ಚುತ್ತದೆ,
ಹೌದು, ನಾಗರ ಹಾವಿನ ಹಾಗೆ ಕಡಿಯುತ್ತದೆ.
33 ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವುದು,
ಮನಸ್ಸು ವಿಪರೀತಗಳನ್ನು ಹೊರಪಡಿಸುವುದು.
34 ನೀನು ಸಮುದ್ರದ ನಡುವೆಯಾಗಲಿ,
ಹಡಗಿನ ಕಂಬದ ತುದಿಯಲ್ಲಿಯಾಗಲಿ ಮಲಗಿರುವವನಂತೆ ಇರುವಿ.
35 ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ,
ಬಡಿದರೂ ತಿಳಿಯಲಿಲ್ಲ,
ಯಾವಾಗ ಎಚ್ಚೆತ್ತೇನು? ಪುನಃ ಅದನ್ನೇ ಹುಡುಕೇನು ಎಂದುಕೊಳ್ಳುವಿ.
*23:1 23:1 ನಿನ್ನ ಮುಂದಿಟ್ಟಿರುವುದರ ಬಗ್ಗೆ ಎಚ್ಚರಿಕೆಯಾಗಿರು. ಅಥವಾ ಯಾರ ಸನ್ನಿಧಾನದಲ್ಲಿ ಇದ್ದೀ ಎಂಬುದನ್ನು ಮರೆಯದಿರು ಅಥವಾ ಯಾರ ಮುಂದಿರುವೆ ಎಂಬುದನ್ನು ಮರೆಯದಿರು.