16
ಅಪತ್ತಿನ ದಿನ
1 ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, 2 “ನೀನು ಮದುವೆಯಾಗಬೇಡ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ಹುಟ್ಟದಿರಲಿ. 3 ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ, 4 ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.
5 ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ. 6 ಈ ದೇಶದಲ್ಲಿನ ದೊಡ್ಡವರೂ. ಅಲ್ಪರೂ ಸಾಯುವರು. ಅವರನ್ನು ಯಾರೂ ಹೂಣಿಡುವುದಿಲ್ಲ, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಗಾಯಮಾಡಿಕೊಳ್ಳುವುದಿಲ್ಲ, ತಲೆಬೋಳಿಸಿಕೊಳ್ಳುವುದಿಲ್ಲ. 7 ಸತ್ತವನಿಗೋಸ್ಕರ ದುಃಖಪಡುವವರನ್ನು ಸಂತೈಸುವುದಕ್ಕಾಗಿ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ ತಾಯಿಯನ್ನಾಗಲಿ ಕಳಕೊಂಡವರಿಗೆ ಯಾರೂ ಸಮಾಧಾನದಾಯಕ ಪಾನಪಾತ್ರೆಯನ್ನು ನೀಡುವುದಿಲ್ಲ. 8 ಔತಣದ ಮನೆಯಲ್ಲಿಯೂ ಸೇರಬೇಡ, ಅಲ್ಲಿನವರೊಂದಿಗೆ ಕುಳಿತು ತಿನ್ನಬೇಡ, ಕುಡಿಯಬೇಡ. 9 ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’ 10 ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಕೇಳುವಾಗ, 11 ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ, 12 ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ, 13 ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’ ” ಎಂದು ಹೇಳಿದನು.
ಮುಂದಿನ ಅತಿಶಯವಾದ ಉದ್ಧಾರ
14 “ಇಗೋ, ಮುಂದಿನ ಕಾಲದಲ್ಲಿ ಜನರು, ‘ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂಬುದಾಗಿ ಪ್ರಮಾಣಮಾಡುವುದನ್ನು ಬಿಟ್ಟು, 15 ‘ಇಸ್ರಾಯೇಲರನ್ನು ಬಡಗಣ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವರು; ನಾನು ಅವರ ಪೂರ್ವಿಕರಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ” ಎಂದು ಯೆಹೋವನು ಘೋಷಿಸುತ್ತಾನೆ.
ಯೆಹೂದ್ಯರಲ್ಲಿ ನೆಲೆಗೊಂಡ ಪಾಪ, ತಪ್ಪಿಸಿಕೊಳ್ಳಲಾಗದ ದಂಡನೆ
16 ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು. 17 ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ. 18 ಅವರ ಅಧರ್ಮಕ್ಕೂ, ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯವಿಗ್ರಹಗಳಿಂದ ನನ್ನ ದೇಶವನ್ನು ಹೊಲಸುಮಾಡಿ, ನನ್ನ ಸ್ವತ್ತನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.”
ಬಲಪಡಿಸುವ ಯೆಹೋವನು
19 ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು. 20 ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ.
21 ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.