19
ಸೊದೋಮ್ ಗೊಮೋರ ಪಟ್ಟಣಗಳ ನಾಶನ
1 ಆ ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ ಲೋಟನು ಸೊದೋಮಿನ ಊರು ಬಾಗಿಲಲ್ಲಿ ಕುಳಿತುಕೊಂಡಿದ್ದನು. ಅವನು ಅವರನ್ನು ಕಂಡಾಗ ಎದ್ದು, ಎದುರುಗೊಂಡು ತಲೆ ಬಾಗಿ ನಮಸ್ಕರಿಸಿ, 2 “ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ಇಳಿದುಕೊಂಡು ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ನಿಮ್ಮ ಮಾರ್ಗ ಹಿಡಿದುಕೊಂಡು ಹೋಗಬಹುದು” ಅಂದನು. ಅವರು, “ಹಾಗಲ್ಲ, ಬೀದಿಯಲ್ಲೇ ರಾತ್ರಿ ಕಳೆಯುತ್ತೇವೆ” ಎನ್ನಲು 3 ಅವನು ಅವರನ್ನು ಬಹಳ ಬಲವಂತ ಮಾಡಿದ್ದರಿಂದ ಅವರು ಅವನ ಬಳಿಯಲ್ಲಿ ಇಳಿದುಕೊಳ್ಳುವುದಕ್ಕೆ ಒಪ್ಪಿದರು. ಅವರು ಮನೆಗೆ ಬಂದಾಗ ಅವನು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು.
4 ಅವರು ಮಲಗುವುದಕ್ಕಿಂತ ಮುಂಚೆ ಹುಡುಗರು ಮುದುಕರು ಸಹಿತವಾಗಿ ಸೊದೋಮಿನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಮುತ್ತಿಗೆ ಹಾಕಿ, 5 ಲೋಟನಿಗೆ, “ಈ ರಾತ್ರಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ನಮಗೆ ಸಂಗಮವಾಗಬೇಕೆಂದು” ಕೂಗಿ ಹೇಳಿದರು. 6 ಲೋಟನು ಅವರ ಬಳಿಗೆ ಹೊರಕ್ಕೆ ಬಂದು ತನ್ನ ಹಿಂದೆ ಕದಹಾಕಿ, 7 “ಅಣ್ಣಂದಿರೇ, ಈ ದುಷ್ಟತನವನ್ನು ಮಾಡಬೇಡಿರಿ. 8 ಕೇಳಿರಿ, ನನಗೆ ಪುರುಷನನ್ನು ಅರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸುತ್ತೇನೆ; ಅವರನ್ನು ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು” ಎಂದು ಹೇಳಿದನು.
9 ಅವರು ದಾರಿ ಬಿಡು ಎಂದು ಹೇಳಿ, “ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯಾಧಿಪತಿಯಾಗಬೇಕೆಂದಿದ್ದಾನೆ; ಆ ಮನುಷ್ಯರಿಗೆ ಕೇಡು ಮಾಡುವುದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ” ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ತುಳಿದು ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
10 ಆದರೆ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮ ಕಡೆಗೆ ಎಳೆದುಕೊಂಡು ಮನೆಯೊಳಗೆ ಸೇರಿಸಿ ಕದ ಮುಚ್ಚಿದರು. 11 ಇದಲ್ಲದೆ ಅವರು ಮನೆಯ ಹೊರಗಿದ್ದ ಮನುಷ್ಯರಿಗೆ ಚಿಕ್ಕವರಿಗೂ ದೊಡ್ಡವರಿಗೂ ಕೂಡ ಕಣ್ಣು ಮೊಬ್ಬಾಗುವಂತೆ ಮಾಡಿದ್ದರಿಂದ ಅವರು ಬಾಗಿಲು ಯಾವುದೆಂದು ತಿಳಿಯದೆ ಬೇಸರಗೊಂಡರು.
ಲೋಟನನ್ನು ಸೊದೋಮಿನಿಂದ ಹೊರಬಂದದ್ದು
12 ಆಗ ಆ ದೂತರು ಲೋಟನಿಗೆ, “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ. 13 ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಲು ದೊಡ್ಡ ಮೊರೆಯು ಯೆಹೋವನಿಗೆ ಮುಟ್ಟಿದ್ದರಿಂದ ಇವರನ್ನು ನಾಶಮಾಡುವುದಕ್ಕಾಗಿ ಆತನು ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
14 ಆಗ ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳನ್ನು ಗೊತ್ತುಮಾಡಿಕೊಂಡಿದ್ದ ಅಳಿಯಂದಿರಿಗೆ ಈ ಸಂಗತಿಯನ್ನು ತಿಳಿಸಿ, “ನೀವೆದ್ದು, ಈ ಸ್ಥಳವನ್ನು ಬಿಟ್ಟು ಹೋಗಿರಿ ಯೆಹೋವನು ಈ ಊರನ್ನು ನಾಶಮಾಡುತ್ತಾನೆ” ಎಂದು ಹೇಳಿದನು. ಆದರೆ ಅವರು ಲೋಟನು ಅಪಹಾಸ್ಯ ಮಾಡುತ್ತಿದ್ದಾನೆ ಎಂದುಕೊಂಡರು.
15 ಹೊತ್ತು ಮೂಡುವುದಕ್ಕೆ ಮುಂಚೆ ಆ ದೂತರು ಲೋಟನಿಗೆ, “ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಬೇಗ ಕರೆದುಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು” ಎಂದು ಹೇಳಿ ತ್ವರೆಪಡಿಸಿದರು.
16 ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಪಟ್ಟಣದ ಆಚೆಗೆ ಬಿಟ್ಟರು. 17 ಅವರನ್ನು ಹೊರಗೆ ತಂದ ಮೇಲೆ ಅವರಲ್ಲಿ ಒಬ್ಬನು, “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ತಿರುಗಿ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದನು.
18 ಅದಕ್ಕೆ ಲೋಟನು, “ಕರ್ತನೇ, ಅದು ನನ್ನಿಂದಾಗದು; 19 ನೀನು ನಿನ್ನ ದಾಸನ ಮೇಲೆ ದಯೆ ಇಟ್ಟು ನನ್ನ ಪ್ರಾಣವನ್ನು ಉಳಿಸಿದ್ದು ಬಹು ವಿಶೇಷವಾದ ಉಪಕಾರವೇ; ಆದರೆ ಬೆಟ್ಟಕ್ಕೆ ಓಡಿ ಹೋಗಲಾರೆನು; ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು. 20 ಆಗೋ, ಅಲ್ಲಿ ಒಂದು ಪಟ್ಟಣ ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವುದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವುದು; ಆ ಊರು ಸಣ್ಣದಲ್ಲವೇ?” ಎಂದನು.
21 ಅದಕ್ಕಾತನು, “ಈ ವಿಷಯದಲ್ಲಿಯೂ ನಿನ್ನ ಬೇಡಿಕೆಯನ್ನು ಅನುಗ್ರಹಿಸಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡವಿ ಹಾಕುವುದಿಲ್ಲ. 22 ಬೇಗ ಅಲ್ಲಿಗೆ ಹೋಗಿ ತಪ್ಪಿಸಿಕೋ; ನೀನು ಆ ಪಟ್ಟಣವನ್ನು ಮುಟ್ಟುವ ತನಕ ನಾನೇನೂ ಮಾಡುವುದಕ್ಕಾಗುವುದಿಲ್ಲ” ಎಂದನು. ಇದರಿಂದ ಆ ಊರಿಗೆ * 19:22 ಚಿಕ್ಕ ಊರು.ಚೋಗರ್ ಎಂದು ಹೆಸರಾಯಿತು.
23 ಲೋಟನು ಚೋಗರ್ ಮುಟ್ಟುವಷ್ಟರಲ್ಲಿ ಸೂರ್ಯನು ಉದಯಿಸಿದನು. 24 ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ 25 ಆ ಪಟ್ಟಣಗಳನ್ನೂ ಸುತ್ತಲಿರುವ ಸೀಮೆಯೆಲ್ಲವನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂಮಿಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳುಮಾಡಿದನು. 26 ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂತಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.
27 ಇತ್ತಲಾಗಿ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ತಿರುಗಿ ಬಂದು ಸೊದೋಮ್ ಗೊಮೋರಗಳ ಕಡೆಗೂ 28 ಸೊದೋಮ್ ಗೊಮೋರದ ಸುತ್ತಲಿನ ಎಲ್ಲಾ ದಿಕ್ಕುಗಳ ಕಡೆಗೂ ನೋಡಿದಾಗ, ಅಯ್ಯೋ, ಆ ಪ್ರದೇಶದಿಂದ ಹೊಗೆಯು ಆವಿಗೆಯ ಹೊಗೆಯಂತೆ ಮೇಲಕ್ಕೇರುತ್ತಿತ್ತು.
29 ದೇವರು ಆ ಪ್ರದೇಶದ ಪಟ್ಟಣಗಳನ್ನು ನಾಶಮಾಡಿದಾಗ, ಅಬ್ರಹಾಮನನ್ನು ನೆನಪುಮಾಡಿಕೊಂಡನು. ಲೋಟನು ವಾಸವಾಗಿದ್ದ ಪಟ್ಟಣಗಳನ್ನು ಹಾಳುಮಾಡಿ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿ ಪಾರುಮಾಡಿದನು.
ಲೋಟನು ಮತ್ತು ಅವನ ಹೆಣ್ಣುಮಕ್ಕಳು
30 ಲೋಟನು ಚೋಗರಿನಲ್ಲಿರುವುದಕ್ಕೆ ಹೆದರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಮಾಡಿದರು. 31 ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ, “ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ; 32 ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.
33 ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದಾಗ ಹಿರೀ ಮಗಳು ಅವನ ಸಂಗಡ ಮಲಗಿಕೊಂಡಳು; ಯಾವಾಗ ಮಲಗಿಕೊಂಡಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
34 ಮಾರನೆಯ ದಿನ ಹಿರಿಯವಳು ಕಿರಿಯವಳಿಗೆ, “ನಿನ್ನೆಯ ರಾತ್ರಿ ನಾನೇ ಅಪ್ಪನ ಸಂಗಡ ಮಲಗಿಕೊಂಡೆನು; ಈ ರಾತ್ರಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆ ಮೇಲೆ ನೀನು ಅವನ ಸಂಗಡ ಮಲಗಿಕೋ; ಹೀಗೆ ನಮ್ಮ ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು. 35 ಆ ರಾತ್ರಿಯೂ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು; ಅವಳು ಯಾವಾಗ ಮಲಗಿದಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
36 ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಬಸುರಾದರು. 37 ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಮೋವಾಬ್” (ತಂದೆಯಿಂದ ಹುಟ್ಟಿದವನು) ಎಂದು ಹೆಸರಿಟ್ಟಳು. ಇಂದಿನ ವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲಪುರುಷನು. 38 ಕಿರಿಯ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಬೆನಮ್ಮಿ” (ರಕ್ತ ಸಂಬಂಧಿಕನ ಮಗ) ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲಪುರುಷನು.