11
ಚೊಚ್ಚಲುಗಳ ಸಂಹಾರ
ಯೆಹೋವನು ಮೋಶೆಗೆ, “ಫರೋಹನಿಗೂ ಮತ್ತು ಐಗುಪ್ತ್ಯರಿಗೂ ಇನ್ನೊಂದು ಉಪದ್ರವವನ್ನು ಬರಮಾಡುತ್ತೇನೆ. ಅದು ಬಂದನಂತರ ಅವನು ನಿಮಗೆ ಇಲ್ಲಿಂದ ಹೋಗುವುದಕ್ಕೆ ಅಪ್ಪಣೆ ಕೊಡುವನು. ಮಾತ್ರವಲ್ಲದೆ ನಿಮ್ಮೆಲ್ಲರನ್ನು ಬಲವಂತದಿಂದ ಕಳುಹಿಸಿ ಬಿಡುವನು. ಆದುದರಿಂದ ಸ್ತ್ರೀಪುರುಷರೆಲ್ಲರೂ ತಮ್ಮ ತಮ್ಮ ನೆರೆಹೊರೆಯವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಕೇಳಿಕೊಳ್ಳಬೇಕೆಂಬುದಾಗಿ ಜನರಿಗೆ ಸ್ಪಷ್ಟವಾಗಿ ಹೇಳು” ಎಂದನು. ಯೆಹೋವನು ಇಸ್ರಾಯೇಲರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದನು. ಇದಲ್ಲದೆ ಐಗುಪ್ತ ದೇಶದಲ್ಲಿ ಫರೋಹನ ಪ್ರಜಾಪರಿವಾರದವರು ಹಾಗು ಜನರು ಮೋಶೆಯನ್ನು ಮಹಾಶ್ರೇಷ್ಠಪುರುಷನೆಂದು ಭಾವಿಸಿದರು.
ಆಗ ಮೋಶೆ ಫರೋಹನಿಗೆ, “ಯೆಹೋವನು ಅಪ್ಪಣೆಮಾಡುವುದೇನೆಂದರೆ, ‘ನಾನು ಮಧ್ಯರಾತ್ರಿಯಲ್ಲಿ ಐಗುಪ್ತ್ಯರ ನಡುವೆ ಹಾದುಹೋಗುವೆನು. ಆಗ ಸಿಂಹಾಸನದ ಮೇಲೆ ಕುಳಿತಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು, ಬೀಸುವಕಲ್ಲಿನ ಹಿಂದೆ ಕುಳಿತಿರುವ ದಾಸಿಯ ಚೊಚ್ಚಲು ಮಗನವರೆಗೂ ಐಗುಪ್ತ ದೇಶದಲ್ಲಿರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಪಶುಗಳಲ್ಲಿಯೂ ಚೊಚ್ಚಲಾದವುಗಳೆಲ್ಲಾ ಸಾಯುವವು. ಆಗ ಐಗುಪ್ತ ದೇಶದಲ್ಲೆಲ್ಲಾ ದೊಡ್ಡ ಗೋಳಾಟವುಂಟಾಗುವುದು, ಅಂಥ ಗೋಳಾಟವು ಈವರೆಗೆ ದೇಶದಲ್ಲಿ ಎಂದೂ ಉಂಟಾಗಿರಲಿಲ್ಲ, ಮುಂದೆಯೂ ಉಂಟಾಗುವುದಿಲ್ಲ. ಆದರೆ ಐಗುಪ್ತ್ಯರಿಗೂ, ಇಸ್ರಾಯೇಲರಿಗೂ ಯೆಹೋವನು ವ್ಯತ್ಯಾಸಮಾಡಿದ್ದಾನೆಂಬುದು ನಿಮಗೆ ತಿಳಿಯುವಂತೆ ಇಸ್ರಾಯೇಲರಲ್ಲಿರುವ ಮನುಷ್ಯರ ಎದುರಿಗಾಗಲಿ, ಪಶುಗಳ ಎದುರಿಗಾಗಲಿ ಒಂದು ನಾಯಿಯಾದರೂ ಬೊಗಳುವುದಿಲ್ಲ’ ಆಗ ನಿನ್ನ ಪರಿವಾರದವರೆಲ್ಲರೂ, ನನ್ನ ಬಳಿಗೆ ಬಂದು ಅಡ್ಡಬಿದ್ದು, ‘ನೀನೂ ನಿನ್ನ ಅಧೀನದಲ್ಲಿರುವ ಜನರೆಲ್ಲರೂ ನಮ್ಮನ್ನು ಬಿಟ್ಟು ಹೋಗಬೇಕು’ ಎಂದು ಬೇಡುವರು. ಆ ಮೇಲೆ ನಾನು ಹೊರಟುಹೋಗುವೆನು” ಎಂದು ಹೇಳಿದನು. ಮೋಶೆ ಈ ಮಾತನ್ನು ಹೇಳಿ ಕೋಪಾವೇಶವುಳ್ಳವನಾಗಿ ಫರೋಹನನ್ನು ಬಿಟ್ಟು ಹೊರಟುಹೋದನು.
ಯೆಹೋವನು ಮೋಶೆಗೆ, “ಐಗುಪ್ತ ದೇಶದಲ್ಲಿ ನನ್ನ ಮಹತ್ಕಾರ್ಯಗಳನ್ನು ಇನ್ನೂ ಹೆಚ್ಚಾಗಿ ನಡೆಯಬೇಕಾಗಿರುವುದರಿಂದ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ” ಎಂದು ಹೇಳಿದನು. 10 ಮೋಶೆ ಮತ್ತು ಆರೋನರು ಫರೋಹನ ಮುಂದೆ ಆ ಮಹತ್ಕಾರ್ಯಗಳನ್ನೆಲ್ಲಾ ಮಾಡಿದರು. ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಫರೋಹನು ಇಸ್ರಾಯೇಲರಿಗೆ ತನ್ನ ದೇಶವನ್ನು ಬಿಟ್ಟು ಹೋಗುವುದಕ್ಕೆ ಅಪ್ಪಣೆ ಕೊಡದೆ ಹೋದನು.